Mangaluru: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಿಂದ ಕೋಮು ಸಂಘರ್ಷದ ಬಿಸಿ ವಾತಾವರಣವಿದ್ದು, ಇದರ ಜೊತೆಗೆ 15 ಜನ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನೂತನ ಎಸ್‌ಪಿ ರಾತ್ರೋರಾತ್ರಿ ಹಿಂದೂ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದು, ಮಧ್ಯರಾತ್ರಿ ಪೊಲೀಸರು ಮನೆಗೆ ಆಗಮನಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ. ಪೊಲೀಸರ ಈ ನಡೆಯಿಂದ ಬೇಸತ್ತ ಹಿಂದೂ ಕಾರ್ಯಕರ್ತರು ಠಾಣೆ ಎದುರು ಹಾಜರಾಗಿದ್ದಕ್ಕೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಯಾವುದೇ ಪೂರ್ವಾನುಮತಿ ಪಡೆಯದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್ ನೂಜಿಬಾಳ್ತಿಲ, ರಾದಾಕೃಷ್ಣ. ಕೆ, ಜಯಂತ್ ಮತ್ತು ಇತರೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ರಾತ್ರೋರಾತ್ರಿ ಕಡಬ ತಾಲೂಕಿನ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜಿಪಿಎಸ್ ಫೋಟೋ ತೆಗೆದು ಸಂಘಟನೆ ಮುಖಂಡರ ಮಾಃಇತಿ ಸಂಗ್ರಹಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಕ್ಕೆ ಮುಂದಾಗಿದ್ದಾರೆ.
ದಕ್ಷಿಣ ಕನ್ನಡ ವಿಹೆಚ್‌ಪಿ ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ಹೇಳಿಕೆ ನೀಡಿದ್ದು, ರಾತ್ರೋರಾತ್ರಿ ಪೊಲೀಸರು ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಮನೆಗಳಿಗೆ ದಿಢೀರ್ ಭೇಟಿ ನೀಡಿ ಅಪರಾಧಿಗಳಂತೆ ಬಿಂಬಿಸುತ್ತಿದ್ದು, ಇದರಿಂದ ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿ ಉಂಟಾಗಿದೆ. ಇದು ಹೀಗೆ ಮುಂದುವರಿದರೆ ಹೋರಾಟ ಅನಿವಾರ್ಯ ಎನ್ನುವ ಎಚ್ಚರಿಕೆ ನೀಡಿದ್ದಾರೆ.
