Chikkodi: ತನ್ನ ಅಣ್ಣ ಹೆಚ್ಚು ಹಣ ಸಂಪಾದನೆ ಮಾಡಿ ಶ್ರೀಮಂತ ಆಗುವುದನ್ನು ಸಹಿಸದೇ, ಸ್ವಂತ ತಮ್ಮನೇ ಅಣ್ಣನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ನಡೆದಿದೆ. ಹುಕ್ಕೆರಿಯ ಹಟ್ಟಿ ಆಲೂರು ಗ್ರಾಮದ ರಾಯಪ್ಪ ಕಮತಿ (28) ಹತ್ಯೆಯಾದ ದುರ್ದೈವಿ. ಈತನ ತಮ್ಮ ಬಸವರಾಜ ಕಮತಿ ಹತ್ಯೆಗೈದ ಆರೋಪಿಯಾಗಿದ್ದಾನೆ.
ರಾಯಪ್ಪ ಕಮತಿಯು ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸಲು ತೆರಳಿದ್ದಾಗ ಹತ್ಯೆಯಾಗಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಮೊದಲಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಒಂದು ತಿಂಗಳ ತನಿಖೆ ಬಳಿಕ ಕೊಲೆ ಮಾಡಿರುವುದು ಹತ್ಯೆಯಾದವನ ತಮ್ಮನೇ ಎಂದು ಗೊತ್ತಾಗಿದೆ.
*ಆರೋಪಿಯನ್ನು ಪತ್ತೆ ಆದುದೇ ರೋಚಕ!*
ಆರೋಪಿ ತಮ್ಮ ಅಣ್ಣನ ಕೊಲೆಗೂ ಮುನ್ನ ಮೊಬೈಲ್‍ನ್ನು ಮನೆಯಲ್ಲೇ ಇಟ್ಟು ಹೋಗಿದ್ದ. ಇದರಿಂದ ಟೆಕ್ನಿಕಲ್ ಎವಿಡೆನ್ಸ್ ಕೂಡ ಸಿಕ್ಕಿರಲಿಲ್ಲ. ಹಂತಕ ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರಿ ಆತನ ಬಾಯ್ಬಿಡಿಸಿದ್ದಾರೆ.
ಕೊಲೆಗಾರ ಬಸವರಾಜ್, ಕೊಲೆ ಮಾಡಿ ಮನೆಗೆ ಬಂದು ಆರಾಮಾಗಿ ಯಾವುದೇ ಸಂಶಯ ಬಾರದಂತೆ ಇದ್ದ. ಈತನ ಅಣ್ಣ ನಾಪತ್ತೆ ಆಗಿದ್ದಾನೆ ಎಂಬ ವಿಚಾರ ಸುದ್ದಿಯಾಗುತ್ತದೆ. ಆಗ ಮನೆಯಲ್ಲಿ, ಅಣ್ಣನನ್ನು ಹುಡುಕಲು ಆತನಲ್ಲಿ ಹೇಳಿದ್ದಾರೆ. ಈ ವೇಳೆ ಆರೋಪಿ ತಮ್ಮನು, ಅಣ್ಣನ ಮೊಬೈಲ್‍ಗೆ ಒಂದೇ ಸಲ ಕರೆ ಮಾಡಿ ಸುಮ್ಮನೆ ಕೂತಿದ್ದ. ಈ ವಿಚಾರ ಪೊಲೀಸರ ಗಮನಕ್ಕೆ ಬಂದು ಅಣ್ಣನನ್ನು ಹುಡುಕಬೇಕಿದ್ದ ತಮ್ಮ ಅಥವಾ ಮನೆಯವರು ಸತತವಾಗಿ ಆತನ ಮೊಬೈಲ್‍ಗೆ ಕರೆ ಮಾಡಬೇಕಿತ್ತು. ಯಾಕೆ ಒಂದೇ ಬಾರಿ ಕರೆ ಮಾಡಿ ಸುಮ್ಮನಾದ ಎಂದು ಪೊಲೀಸರು ಆಲೋಚಿಸಿದ್ದರು. ಆಗ ಪೊಲೀಸರು ಕರೆದು ಗದರಿಸಿ ‘ಸರಿಯಾದ ‘ ರೀತಿಯಲ್ಲಿ ವಿಚಾರಣೆ ಮಾಡಿದಾಗ, ಕೊಲೆ ರಹಸ್ಯ ಬಯಲಿಗೆ ಬಂದಿದೆ.
ಕೇವಲ, ತನ್ನ ಅಣ್ಣ ಹೆಚ್ಚು ದುಡಿದು ಹೆಚ್ಚು ಸಂಪಾದನೆ ಮಾಡಿದ್ದನ್ನ ಸಹಿಸದೇ ಕೊಲೆ ಮಾಡಿರುವುದಾಗಿ ತಮ್ಮ ಬಸವರಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
