Puttur: ರೈಲಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಯುವಕನೋರ್ವನಿಗೆ ಯುವಕರ ತಂಡವೊಂದು ಥಳಿಸಿದ ಘಟನೆಯೊಂದು ಇಂದು ಬೆಳಿಗ್ಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಹಿಂದೂ ಧರ್ಮಕ್ಕೆ ಸೇರಿದ ಯುವಕ ಹಲ್ಲೆಗೊಳಗಾಗಿದ್ದು, ಹಲ್ಲೆ ಮಾಡಿದ ಯುವಕರು ಅನ್ಯಧರ್ಮೀಯರು ಎಂದು ವರದಿಯಾಗಿದೆ. ವರದಿ ಅನುಸಾರ, ಹಲ್ಲೆ ಮಾಡಿದ ನಾಲ್ವರು ಯುವಕರನ್ನು ಪುತ್ತೂರು ನಗರ ಠಾಣೆ ಪೊಲೀಸರು ಸಾಲ್ಮರ ಮಸೀದಿ ಬಳಿಯಲ್ಲಿ ವಶ ಪಡೆದಿದ್ದಾರೆ.
ವಶಕ್ಕೆ ಪಡೆದ ನಾಲ್ವರು ಆರೋಪಿಗಳನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹಲ್ಲೆ ಮಾಡಿದ ನಾಲ್ವರು ಪುತ್ತೂರು ವಾಸಿಗಳು.
ಬೆಂಗಳೂರಿನಿಂದ ಮಂಗಳೂರಿಗೆ ಸಾಗುತ್ತಿದ್ದ ರೈಲು, ಮಂಡ್ಯ ಬಳಿ ಬಂದಾಗ ನಾಲ್ಕು ಮಂದಿ ಅನ್ಯಧರ್ಮದ ಯುವಕರು ಹಾಡುಗಳನ್ನು ಹಾಕಿ ಉಳಿದ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿದ್ದರು ಎನ್ನಲಾಗಿದೆ. ಸಹ ಪ್ರಯಾಣಿಕರೊಬ್ಬರು ಇದರಿಂದ ರೋಸಿ ಹೋಗಿದ್ದು, ಆತ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ಬಂದ ರೈಲ್ವೇ ಪೊಲೀಸರು ಇತರ ನಾಲ್ವರಿಗೆ ಎಚ್ಚರಿಕೆ ನೀಡಿದ್ದರು.
ಇದರಿಂದ ಕೋಪಗೊಂಡ ಆ ನಾಲ್ವರು ತಮ್ಮ ಮೇಲೆ ದೂರು ನೀಡಿದ ಆ ವ್ಯಕ್ತಿಗೆ, ರೈಲು ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಬಂದಾಗ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಪರಾರಿಯಾಗಿದ್ದಾರೆ. ನಂತರ ಪುತ್ತೂರು ನಗರ ಠಾಣಾ ಪೊಲೀಸರಿಗೆ ಈ ಕುರಿತು ಮಾಹಿತಿ ಬಂದಿದ್ದು, ಪರಾರಿಯಾಗಿದ್ದ ನಾಲ್ವರನ್ನು ಸಾಲ್ಮರ ಮಸೀದಿಯ ಬಳಿಯಿಂದ ವಶಕ್ಕೆ ಪಡೆದುಕೊಳ್ಳಲಾಯಿತು.
