ಪುತ್ತೂರು: ಕಾರು ವ್ಯಾಪಾರದ ಮಾತುಕತೆ ಸಂದರ್ಭದಲ್ಲಿ ತಂಡವೊಂದು ವ್ಯಕ್ತಿಯೊಬ್ಬರಿಗೆ ಚೂರಿಯಿಂದ ತಿವಿದು ಹಲ್ಲೆ ಮಾಡಿರುವ ಘಟನೆ ಕೆದಿಲ ಗ್ರಾಮದ ಸತ್ತಿಕಲ್ಲು ಪೆಟ್ರೋಲ್ ಪಂಪ್ ಬಳಿ ನಡೆದಿರುವ ಕುರಿತು ವರದಿಯಾಗಿದೆ.
ಕೆದಿಲ ಗ್ರಾಮದ ಸರೋಳಿ ನಿವಾಸಿ ಅಬೂಬಕ್ಕರ್ ರಾಶೀಕ್ (28) ಎಂಬುವವರು ಚೂರಿಯಿಂದ ಗಾಯಗೊಂಡವರು.
ಬೆಂಗಳೂರಿನ ಶ್ರೀರಾಮ ಫೈನಾನ್ಸ್‌ನವರು ಸ್ವಾದೀನಕ್ಕೆ ತೆಗೆದುಕೊಂಡ ಇನೋವಾ ಕಾರನ್ನು ಅಬೂಬಕ್ಕರ್ ರಾಶಿಕ್ ಅವರಿಗೆ ಮಾರಿದ್ದರು. ಆದರೆ ಕಾರಿನ ಮಾಲಕ ಸೂರಜ್ ಅದೇ ಕಾರನ್ನು ಪುನಃ ಖರೀದಿ ಮಾಡಲು ತನ್ನ ಸ್ನೇಹಿತರ ಜೊತೆ ಅಬೂಬಕ್ಕರ್ ರಾಶೀಕ್ ಅವರ ಜೊತೆ ಕೆದಿಲ ಸತ್ತಿಕಲ್ ಪೆಟ್ರೋಲ್ ಪಂಪ್ ಬಳಿ ವ್ಯಾಪಾರದ ಮಾತುಕತೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಸೂರಜ್ ಅಬೂಬಕ್ಕರ್ ಅವರಿಂದ ಕಾರಿನ ಕೀಯನ್ನು ಬಲವಂತವಾಗಿ ಕಸಿಯಲು ಯತ್ನ ಮಾಡಿದ್ದು, ಇದನ್ನು ವಿರೋಧ ಮಾಡಿದ ಅಬೂಬಕ್ಕರ್ ಮೇಲೆ ಸೂರಜ್ ಮತ್ತಿತರರು ಸೇರಿ ಚೂರಿಯಿಂದ ತಿವಿದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಿಂದ ಗಾಯಗೊಂಡ ಅಬೂಬಕ್ಕರ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
