

ಪುತ್ತೂರು: ಅಪ್ಪ ಮಗನ ಜಗಳ ನಡೆದಿದ್ದು, ತಂದೆ ಚೂರಿ ಇರಿತಕ್ಕೊಳಗಾಗಿ, ಅಪ್ರಾಪ್ತ ಬಾಲಕ ಮಗ ಕೋವಿಯಿಂದ ಗುಂಡು ಹಾರಿಸಿ ಮೃತಪಟ್ಟ ಘಟನೆ ಕಡಬ ಬಳಿಯ ರಾಮಕುಂಜದಲ್ಲಿ ನಡೆದಿದೆ.
ರಾಮಕುಂಜ ಗ್ರಾಮದ ವಸಂತ ಅಮೀನ್ ಎಂಬುವವರ ಪುತ್ರ ಮೋಕ್ಷ (17) ಎಂಬ ಬಾಲಕ ಮೃತಪಟ್ಟಿದ್ದಾರೆ. ತಂದೆ ಚೂರಿ ಇರಿತದಿಂದ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಕೌಟುಂಬಿಕ ಕಲಹದಿಂದ ಸಂಜೆ ಹೊತ್ತಿಗೆ ತಂದೆ ಮಗನ ಸಂಘರ್ಷ ನಡೆದಿರುವ ಅನುಮಾನವಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಬಾಲಕನೇ ಶೂಟ್ ಮಾಡಿಕೊಂಡಿದ್ದಾನೆಯೇ ಅಥವಾ ತಂದೆ ಮಗನಿಗೆ ಶೂಟ್ ಮಾಡಿ ಕೊಂದಿದ್ದಾ? ಎನ್ನುವ ಶಂಕೆ ವ್ಯಕ್ತವಾಗಿದೆ.
ವಸಂತ ಅಮೀನ್ ಅವರು ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಮಾಡಿಕೊಂಡಿದ್ದು, ತಂದೆ ಮಗ ವಾಸ ಮಾಡುತ್ತಿದ್ದರು. ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ. ಕಡಬ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಘಟನೆ ಕುರಿತು ವಸಂತ ಅಮೀನ್ ವಿರುದ್ಧ ಅವರ ಪತ್ನಿ ಜಯಶ್ರೀ ದೂರನ್ನು ದಾಖಲು ಮಾಡಿದ್ದಾರೆ. ಮಗನನ್ನು ವಸಂತ ಶೂಟ್ ಮಾಡಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಪತ್ನಿ ಜಯಶ್ರೀ ಪತಿಯೊಂದಿಗೆ ಮನಸ್ತಾಪಗೊಂಡು ಮಂಗಳೂರಿನ ತನ್ನ ತಾಯಿ ಮನೆಯಲ್ಲಿದ್ದರು. ಕಳೆದ ಒಂದು ವರ್ಷದಿಂದ ಮನೆಯಲ್ಲಿ ತಂದೆ ಮಗ ಮಾತ್ರ ಇದ್ದ ಎಂದು ವರದಿಯಾಗಿದೆ.
ಮನೆಯಲ್ಲಿ ಶನಿವಾರ ಸಂಜೆ ವಸಂತ ಅಮೀನ್ ಅವರು ಪರಿಚಯದವರಿಗೆ ಫೋನ್ ಮಾಡಿ ತನ್ನ ಮಗ ಮೋಕ್ಷ್ ಚೂರಿಯಿಂದ ಇರಿದಿದ್ದು, ಮಗ ಗುಂಡು ಹಾರಿಸಿಕೊಂಡಿದ್ದಾನೆಂದು ತಿಳಿಸಿದ್ದು, ಪರಿಚಯಸ್ಥರು ಮನೆಗೆ ಭೇಟಿ ನೀಡಿದಾಗ ವಸಂತ ಅಮೀನ್ ಗಂಭಿರ ಗಾಯಗೊಂಡ ಸ್ಥಿತಿಯಲ್ಲಿದ್ದರೆಂದು, ಮಗ ಮೋಕ್ಷ್ ಗುಂಡೇಟಿನಿಂದ ಸಾವಿಗೀಡಾದ ಸ್ಥಿತಿಯಲ್ಲಿದ್ದನೆಂದು ತಿಳಿದು ಬಂದಿದೆ.
ರಾಮಕುಂಜದ ಆಸ್ತಿಯು ತನ್ನ ಹೆಸರಿನಲ್ಲಿದ್ದು, ಅದನ್ನು ನಾನು ಗಂಡನ ಹೆಸರಿಗೆ ಬರೆದುಕೊಡಬೇಕೆಂದು ಗಂಡ ಹೇಳುತ್ತಿದ್ದು, ಅದಕ್ಕೆ ಮಗ ವಿರೋಧ ವ್ಯಕ್ತಪಡಿಸುತ್ತಿದ್ದನೆಂದು ಆರೋಪಿಸಿರುವ ಆಕೆ ತನ್ನೊಂದಿಗೆ ಪೆರ್ಲದಲ್ಲಿ ವಾಸವಾಗಿದ್ದ ಮಗನನ್ನು ಕಳೆದ ಒಂದು ತಿಂಗಳ ಹಿಂದೆ ರಾಮಕುಂಜಕ್ಕೆ ಕರೆದು ತಂದಿದ್ದು, ಶನಿವಾರ ವಿನಾ ಕಾರಣ ಚಿಕಿತ್ಸೆಯ ನೆಪದಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಮಗ ತನಗೆ ಏನಾದರೂ ಸಮಸ್ಯೆಯಾದರೆ ತಂದೆಯೇ ಕಾರಣ ಎಂದು ನನಗೆ ಫೋನ್‌ನಲ್ಲಿ ತಿಳಿಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಮಾತನಾಡಿ, ಗಾಯಾಳು ವಸಂತ ಅಮೀನ್ ನೀಡಿದ ಹೇಳಿಕೆಗೂ, ಮೃತ ಬಾಲಕನ ತಾಯಿ ನೀಡಿದ ಹೇಳಿಕೆಗೂ ಭಾರೀ ವ್ಯತ್ಯಾಸವಿದ್ದು, ಕೂಲಂಕಷ ತನಿಖೆಯ ಬಳಿಕವೇ ಸತ್ಯ ತಿಳಿಯಬೇಕಾಗಿದೆ ಎಂದಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗರಾಜ್ , ಕಡಬ ಎಸೈ ಭೇಟಿ ನೀಡಿದ್ದು, ತನಿಖೆ ಮುಂದುವರೆದಿದೆ.













