

ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾಗಿರುವ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎನ್ನುವ ಆರೋಪದ ಮೇರೆಗೆ ಪುನೀತ್ ಕೆರೆಹಳ್ಳಿ ಅಲ್ಲಿಗೆ ಹೋಗಿದ್ದು, ಹಸನ್ ಎನ್ನುವಾತ ಅಕ್ರಮ ಬಾಂಗ್ಲಾ ವಲಸಿಗ ಎಂದು ಪುನೀತ್ ಆರೋಪ ಮಾಡಿದ್ದಲ್ಲದೇ, ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ದೂರು ನೀಡಿ ಠಾಣೆಯಿಂದ ಹೊರ ಹೋಗುತ್ತಿದ್ದಂತೆ ಬಾಗಲಗುಂಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ರಮ ಗೋ ಸಾಗಾಟ ಸೇರಿ ಹಲವು ಪ್ರಕರಣಗಳು ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದವು. ಈ ಕುರಿತು ಹಲವು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಲಗುಂಟೆ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧನ ಮಾಡಿದ್ದಾರೆ.
ಡಿ.18 ರಂದು ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿಯೂ ಪುನೀತ್ ಕೆರೆಹಳ್ಳಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಆರೋಪ ಮಾಡಿ ಶೆಡ್‌ಗಳಿಗೆ ತೆರಳಿ ದಾಖಲೆ ತೋರಿಸುವಂತೆ ದಾಂಧಲೆ ನಡೆಸಿದ ಆರೋಪ ಅವರ ಮೇಲೆ ದಾಖಲಾಗಿತ್ತು.













