New delhi:ಸಾಲು ಸಾಲು ಕೊಲೆಗಳನ್ನು ಮಾಡಿ ಅನುಮಾನ ಬಾರದಂತೆ ಶವಗಳನ್ನು ಮೊಸಳೆಗೆ ಹಾಕುತ್ತಿದ್ದ ಖತರ್ನಾಕ್ ಡಾಕ್ಟರ್ ಒಬ್ಬ ಇದೀಗ ಪೊಲೀಸ್ ಕೈಗೆ ಸಿಕ್ಕಿರುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಭಯ ಹುಟ್ಟಿಸಿದ್ದ ಈ ‘ಡಾಕ್ಟರ್ ಡೆತ್’ ನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಸಫಲರಾಗಿದ್ದು, ಅವರ ಪ್ರಕಾರ ಈತ ತನ್ನ ಮೇಲೆ ಅನುಮಾನ ಬರಬಾರದೆಂದು ಈ ರೀತಿ ಶವಗಳನ್ನು ಮೊಸಳೆಗೆ ತುಂಡು ತುಂಡಾಗಿ ಕತ್ತರಿಸಿ ಹಾಕುತ್ತಿದ್ದ ಎಂದು ಹೇಳಲಾಗಿದೆ.
ತನ್ನ ಇಂತಹ ಕೃತ್ಯಗಳಿಂದಲೇ ಈತ ‘ಡಾಕ್ಟರ್ ಡೆತ್’ ಎಂದು ಕುಖ್ಯಾತಿ ಪಡೆದಿದ್ದು, ಈತನನ್ನು ರಾಜಸ್ಥಾನದ ದೌಸಾದಲ್ಲಿರುವ ಆಶ್ರಮದಿಂದ ಬಂಧಿಸಲಾಗಿತ್ತು. ಅಲ್ಲಿ ಆತ ತಾನು ಅರ್ಚಕನೆಂದು ಹೇಳಿಕೊಂಡು ಬದುಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅದಾದ ನಂತರ ಆತ ಕಳೆದ ವರ್ಷ ಪೆರೋಲ್ ನಿಂದ ತಪ್ಪಿಸಿಕೊಂಡಿದ್ದು, ರಾಜಸ್ಥಾನದ ಈ ಡಾಕ್ಟರ್ ದೆಹಲಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.
67 ವರ್ಷದ ಆಯುರ್ವೇದ ವೈದ್ಯ ದೇವೇಂದರ್ ಶರ್ಮಾ ಎಂಬ ಸೀರಿಯಲ್ ಕಿಲ್ಲರ್ ಬಹು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದು, ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿನಲ್ಲಿ ತಾನು ಕೊಂದವರ ದೇಹಗಳನ್ನು ಎಸೆಯುತ್ತಿದ್ದ. ಹೀಗಾಗಿ, ಆ ಶವಗಳ ಮಾಹಿತಿ ಪೊಲೀಸರಿಗೆ ಸಿಗುತ್ತಿರಲಿಲ್ಲ ಎನ್ನಲಾಗಿದೆ.
ಈತ ಪೆರೋಲ್‌ನಲ್ಲಿದ್ದಾಗ ಪರಾರಿಯಾಗಿರುವುದು ಇದೇ ಮೊದಲಲ್ಲ. 2020ರಲ್ಲಿ 20 ದಿನಗಳ ಪೆರೋಲ್ ನಂತರ ಅವನು ಹಿಂತಿರುಗಿರಲಿಲ್ಲ. ದೆಹಲಿಯಲ್ಲಿ ಬಂಧಿಸಲ್ಪಡುವ ಮೊದಲು 7 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ಜೂನ್ 2023ರಲ್ಲಿ ಅವನಿಗೆ ಎರಡು ತಿಂಗಳು ಪೆರೋಲ್ ನೀಡಲಾಯಿತು. ಆದರೆ ಆಗಸ್ಟ್ 3, 2023ರ ನಂತರ ಮತ್ತೆ ಆತ ನಾ ಪತ್ತೆಯಾಗಿದ್ದನು ಎಂಬ ವಿಷಯ ತಿಳಿದು ಬಂದಿದೆ.
