Bengaluru: ಮದುವೆ ಆಗುವಾಗ ಸುಂದರವಾಗಿದ್ದೆ. ಈಗ ದಪ್ಪಗಾಗಿದ್ದೀಯಾ ಎಂದು ವ್ಯಕ್ತಿಯೋರ್ವ ತನ್ನ ಪತ್ನಿ, ಮಾವ ಹಾಗೂ ಮಗನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ನೆಲಗೆದರನಹಳ್ಳಿಯಲ್ಲಿ ನಡೆದಿದೆ.
ಪತಿ ಪುಲಿ ಸಾಯಿಕುಮಾರ್ ವಿರುದ್ಧ ಪತ್ನಿ ದೂರು ದಾಖಲು ಮಾಡಿದ್ದಾಳೆ. ಸೌಂದರ್ಯದ ವಿಚಾರಕ್ಕೆ ಪದೇ ಪದೇ ಪತಿ ಗಲಾಟೆ ಮಾಡುತ್ತಿದ್ದ. ವರದಕ್ಷಿಣೆ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ನನ್ನ ಮೇಲೆ, ಮಗನ ಮೇಲೆ, ನನ್ನ ತಂದೆಯ ಮೇಲೆ ಶನಿವಾರ ಪತಿ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾಳೆ.
2021 ರಲ್ಲಿ ಮ್ಯಾಟ್ರಿಮೋನಿಯದಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕಿಯಾಗಿದ್ದ ಮಹಿಳೆಯೋರ್ವಳು ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಪುಲಿ ಸಾಯಿಕುಮಾರ್‌ನ ಪರಿಚಯವಾಗಿದ್ದ. ನಂತರ ಇವರಿಬ್ಬರ ಮದುವೆಯಾಗಿತ್ತು. ನಂತರ ವರದಕ್ಷಿಣೆ ಕಿರುಕುಳ ಪ್ರಾರಂಭವಾಯಿತು ಎಂದು ಮಹಿಳೆ ಆರೋಪ ಮಾಡಿದ್ದಾಳೆ.
ಈ ಹಿಂದೆ ಕೂಡಾ ಪುಲಿ ಸಾಯಿಕುಮಾರ್ ವಿರುದ್ಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಮತ್ತೆ ಗಲಾಟೆ ಮಾಡಿ ಹಲ್ಲೆ ಮಾಡಿರುವ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
