ಲಕ್ನೋ: ತಾವು ಸಾಕಿದ್ದ ನಾಯಿ ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣಕ್ಕೆ ಅಕ್ಕ ತಂಗಿಯರು ಚಿಂತಿತರಾಗಿದ್ದು, ಎಷ್ಟೇ ಖರ್ಚು ಮಾಡಿದರೂ ಆಸ್ಪತ್ರೆಗೆ ದಾಖಲು ಮಾಡಿದರೂ ಚೇತರಿಸದ ಕಾರಣ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ರಾಧಾ ಸಿಂಗ್ (24) ಮತ್ತು ಆಕೆಯ ತಂಗಿ ಜಿಯಾ ಸಿಂಗ್ (22) ಮೃತರು.
ಶೆಫರ್ಡ್ ಟೋನಿಯನ್ನು ಕಳೆದುಕೊಳ್ಳುವ ಭಯದಿಂದ ತಾವೇ ಮೊದಲು ಸಾಯಬೇಕೆಂದು ಫಿನಾಯಿಲ್ ಸೇವನೆ ಮಾಡಿರುವುದಾಗಿ ವರದಿಯಾಗಿದೆ. ಇಬ್ಬರು ಸಹೋದರಿಯರು ಪದವೀಧರರಾಗಿದ್ದು, ಅವರ ನಾಯಿಯೊಂದಿಗೆ ಅಳವಾದ ಭಾವನಾತ್ಮಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಾಯಿ ಅನಾರೋಗ್ಯಕ್ಕೆ ಉಂಟಾಗಿದ್ದರಿಂದ ಊಟ ಮಾಡುವುದನ್ನು ನಿಲ್ಲಿಸಿತ್ತು. ಹಾಗಾಗಿ ಸಹೋದರಿಯರು ಕೂಡಾ ಊಟ ಮಾಡುವುದನ್ನು ನಿಲ್ಲಿಸಿದ್ದರು.
ತಾಯಿ ಗುಲಾಬಿ ದೇವಿ ಏನಾಯಿತು ಎಂದು ಕೇಳಿದಾಗ, ಅವರು ಫಿನಾಯಿಲ್ ಸೇವಿಸಿದ್ದಾಗಿ ಹೇಳಿದ್ದಾರೆ. ವಯಸ್ಸಾದ ತಾಯಿ ಮನೆ ಬಾಗಿಲಲ್ಲಿ ಅಳುತ್ತಾ ಕುಳಿತಿದ್ದರು. ಪ್ರಜ್ಞೆ ಕಳೆದುಕೊಳ್ಳುವ ಮೊದಲು ಸಹೋದರಿಯರು ತಾವು ಸತ್ತ ನಂತರ ನಾಯಿಯನ್ನು ಓಡಿಸಬೇಡಿ ಅದನ್ನು ಮನೆಯಲ್ಲಿಯೇ ಇರಿಸಿ ಮತ್ತು ಅದಕ್ಕೆ ಔಷಧ ನೀಡಿ ಎಂದು ವಿನಂತಿ ಮಾಡಿದ್ದಾಗಿ ಹೇಳಿದ್ದಾರೆ.
ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
