Gokak: ವಿದ್ಯಾರ್ಥಿಯೋರ್ವ ಶಾಲಾ ಬ್ಯಾಗ್ ತಂದು ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆತನ ಮೂವರು ಸಹಪಾಠಿಗಳು ಚಾಕುವಿನಿಂದ ಇರಿದ ಘಟನೆಯೊಂದು ಗೋಕಾಕ್ ನಗರದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ನಡೆದಿದೆ.
ಗಾಯಾಳು 10ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಬಂಡಿವಡ್ಡರ (15) ಎಂದು ಗುರುತಿಸಲಾಗಿದೆ.
ಶಾಲೆ ಮುಗಿದ ನಂತರ ವಾಲ್ಮೀಕಿ ಮೈದಾನಕ್ಕೆ ಬಂದಿದ್ದ ರವಿ ಚಿನ್ನವ್ವ, ಅಶೋಕ್ ಕಂಕಣವಾಡಿ, ಸಿದ್ದಾರ್ಥ ಮಟ್ಟಿಕೊಪ್ಪ ವಿದ್ಯಾರ್ಥಿಗಳು ಸಹಪಾಠಿ ಪ್ರದೀಪ್ ಗೆ ತರಗತಿಯಲ್ಲಿರುವ ಬ್ಯಾಗ್ ತರಲು ಹೇಳಿದ್ದಾರೆ. ಇದಕ್ಕೆ ಪ್ರದೀಪ್ ನಿರಾಕರಿಸಿದ್ದಾನೆ. ಅನಂತರ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಮೂವರು ಸೇರಿ ಪ್ರದೀಪ್ ಕುತ್ತಿಗೆ, ಕೈ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಪರಾರಿಯಾಗಿದ್ದಾರೆ.
ಸ್ಥಳೀಯ ಶಿಕ್ಷಕರು ನೋವಿನಿಂದ ನರಳಾಡುತ್ತಿದ್ದ ಪ್ರದೀಪ್‌ನನ್ನು ಕೂಡಲೇ ಗೋಕಾಕ್‌ನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪೊಲೀಸರು ಆಸ್ಪತ್ರೆಗೆ ದೌಡಾಯಿಸಿದ್ದು, ಮಾಹಿತಿ ಕಲೆ ಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಗೋಕಾಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
