ಮುಂಬೈ: ಮಹಾರಾಷ್ಟ್ರದ ಪಾಲ್ವರ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ತಡವಾಗಿ ಸ್ಕೂಲಿಗೆ ಬಂದಳು ಎನ್ನುವ ಕಾರಣಕ್ಕೆ 100 ಬಸ್ಕಿ ಹೊಡೆಸಿದ್ದು, ವಾರದ ನಂತರ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾರೆ. ಇದೀಗ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.
ವಸಾಯಿಯ ಸತವಲಿಯ ಶಾಲೆಯಲ್ಲಿ ನ.8 ರಂದು ಬಾಲಕಿ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳು ತಡವಾಗಿ ಶಾಲೆಗೆ ಬಂದಿದ್ದರು. ಇವರಿಗೆ ತಲಾ 100 ಬಸ್ಕಿ ಹೊಡೆಸಲಾಗಿದೆ ಎಂದು ಎಂಎನ್‌ಎಸ್ ಸದಸ್ಯರು ಆರೋಪ ಮಾಡಿದ್ದಾರೆ. ಅಮಾನವೀಯ ಶಿಕ್ಷೆಯಿಂದಾಗಿ ನನ್ನ ಮಗಳು ಸಾವಿಗೀಡಾಗಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಹೇಳಿಕೊಂಡಿದ್ದಾರೆ.
ಶಾಲಾ ಬ್ಯಾಗನ್ನು ಬೆನ್ನಿಗೆ ಕಟ್ಟಿ ಬಸ್ಕಿ ಹೊಡೆಯುವಂತೆ ಒತ್ತಾಯ ಮಾಡಲಾಗಿದೆ. ಶಿಕ್ಷೆ ನಂತರ ನನ್ನ ಮಗಳ ಕುತ್ತಿಗೆ ಮತ್ತು ಬೆನ್ನು ನೋವು ಪ್ರಾರಂಭವಾಗಿದೆ. ಎದ್ದೇಳಲು ಆಗಿಲ್ಲ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.
ಬಾಲಕಿಗೆ ಈ ಮೊದಲೇ ಆರೋಗ್ಯ ಸಮಸ್ಯೆಗಳಿದ್ದವು. ಅದರ ನಡುವೆ ಈ ಶಿಕ್ಷೆ ನೀಡಲಾಗಿದೆ. ಇಲ್ಲಿಯವರೆಗೆ ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
