Vijayapura: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ರಾಬರಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕೃತ್ಯ ಮುಂದುವರೆದಿದ್ದು ಇದೀಗ ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಂದಾಜು ₹52.26 ಕೋಟಿ ಮೌಲ್ಯದ 58 ಕೆಜಿ 976 ಗ್ರಾಂ ಚಿನ್ನಾಭರಣ ಮತ್ತು ₹5.20 ಲಕ್ಷ ನಗದು ಕಳ್ಳತನದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ 52.26 ಕೋಟಿ ರೂಪಾಯಿ ಮೌಲ್ಯದ 58 ಕೆಜಿ 976 ಚಿನ್ನಾಭರಣ, 5.20 ಲಕ್ಷ ರೂಪಾಯಿ ನಗದು ದೋಚಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೇ 23 ರಂದು ಕೃತ್ಯ ನಡೆದಿರುವ ಶಂಕೆ ಇದ್ದು, ಇದುವರೆಗೂ ಕಳ್ಳರು ಪತ್ತೆಯಾಗಿಲ್ಲ. ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣ ಇದಾಗಿದೆ.
ಇನ್ನು 59 ಕೆಜಿ ಚಿನ್ನ ಕಳವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಅಂದಾಜಿಸಿದ್ದು ಮೇ 26ರಂದು ಕೆನರಾ ಬ್ಯಾಂಕ್ ಮಂಗೋಲಿ ಶಾಖೆಯ ವ್ಯವಸ್ಥಾಪಕರು ದೂರು ದಾಖಲಿಸಿದ್ದಾರೆ. ಮೇ 23ರಂದು ಸಂಜೆ ಬ್ಯಾಂಕ್‌ಗೆ ಬೀಗ ಹಾಕಿ ಸಿಬ್ಬಂದಿಗಳು ತೆರಳಿದ್ದರು. ಮೇ 24 ಮತ್ತು 25 ರಂದು (ನಾಲ್ಕನೇ ಶನಿವಾರ ಮತ್ತು ಭಾನುವಾರ) ಬ್ಯಾಂಕ್ ರಜೆ ಇತ್ತು. ಮೇ 26 ಸೋಮವಾರ ಸಿಬ್ಬಂದಿಗಳು ಬ್ಯಾಂಕ್ ಗೆ ಬಂದಿದ್ದು ಸ್ವಚ್ಛತ ಸಿಬ್ಬಂದಿ ಶಾಖೆಯನ್ನು ಸ್ವಚ್ಛಗೊಳಿಸುವ ವೇಳೆ ಶಟರ್ ಬೀಗಗಳನ್ನು ಕತ್ತರಿಸಿರುವುದನ್ನು ಅವರು ಗಮನಿಸಿದ್ದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಿಗಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 23 ರಂದು ಸಂಜೆ 6 ಗಂಟೆಯಿಂದ ಮೇ 25ರ ಬೆಳಗ್ಗೆ 11:30 ಅವಧಿಯಲ್ಲಿ ಕೃತ್ಯ ನಡೆದಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
