ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆ ರಂಜಿತಾ ಎಂಬಾಕೆಯನ್ನು ರಸ್ತೆ ಮಧ್ಯೆಯೇ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ನಡೆದಿತ್ತು. ಆರೋಪಿ ರಫೀಕ್ ತಲೆಮರೆಸಿಕೊಂಡಿದ್ದು. ಪೊಲೀಸರು ಶ್ವಾನದಳದ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಅರಣ್ಯದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಕಾಳಮ್ಮನಗರ ಅರಣ್ಯ ಪ್ರದೇಶದಲ್ಲಿ ರಫೀಕ್ ಮೃತದೇಹ ಪತ್ತೆಯಾಗಿದೆ. ಶನಿವಾರ ಘಟನೆ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ. ರಂಜಿತಾ ಸುಮಾರು ಹತ್ತು ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದು, ರಫೀಕ್‌ನಲ್ಲಿ ಪ್ರೀತಿ ಮಾಡುತ್ತಿದ್ದಳು. ಇಬ್ಬರೂ ಕ್ಲಾಸ್‌ಮೇಟ್‌ಗಳಾಗಿದ್ದು, ಇಬ್ಬರ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿತ್ತು. ರಫೀಕ್ ಆಗಾಗ ರಂಜಿತಾ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ. ರಂಜಿತಾ ತನ್ನ ಮಗನ ಜೊತೆ ತಂದೆ ತಾಯಿ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಿದ್ದಳು.
ರಂಜಿತಾ ಜೀವನೋಪಯೋಕ್ಕಾಗಿ ಸರಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ರಫೀಕ್ ಇತ್ತೀಚೆಗೆ ರಂಜಿತಾಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಇದಕ್ಕೆ ರಂಜಿತಾ ಒಪ್ಪಿರಲಿಲ್ಲ. ಇದರಿಂದ ರಫೀಕ್ ಕೋಪಗೊಂಡಿದ್ದು, ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ ಮದುವೆಯ ಪ್ರಸ್ತಾಪ ಮಾಡಿದ್ದು, ನಿರಾಕರಿಸಿದ್ದಕ್ಕೆ ಬೇಸತ್ತು ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ಇತ್ತ ಹಿಂದೂ ಯುವತಿ ಬರ್ಬರವಾಗಿ ಹತ್ಯೆಯಾಗಿರುವುದನ್ನು ಖಂಡಿಸಿ ವಿಎಚ್‌ಪಿ ಸಂಘಟನೆ ಯಲ್ಲಾಪುರದಲ್ಲಿ ಇಂದು ಬಂದ್‌ಗೆ ಕರೆ ನೀಡಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಆರೋಪಿಯನ್ನು ಬಂಧನ ಮಾಡುವವರೆಗೆ ರಂಜಿತಾಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಅದರ ಮಧ್ಯೆಯೇ ಆರೋಪಿ ರಫೀಕ್ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
