Mysore : ಮೈಸೂರಿನಲ್ಲಿ (Mysuru) ನಿನ್ನೆ(ಜನವರಿ 19) ಮಧ್ಯರಾತ್ರಿ ಅಂಗಡಿ ಮುಂದೆ ಕುಳಿತಿದ್ದ ಯುವಕನನ್ನು ಚಾಕು, ಲಾಂಗುಗಳನ್ನು ಹಿಡಿದು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಫೈನಾನ್ಸ್ ಹಾವಳಿ ತಡೆಯಲು ಮುಂದಾಗಿದ್ದೆ ಶಹಬಾಜ್ ಕೊಲೆ ಕಾರಣ ಎನ್ನಲಾಗಿದೆ.
ಮೈಸೂರು ಉದಯಗಿರಿ ಬೀಡಿ ಕಾಲೋನಿ ಬಳಿ 26 ವರ್ಷದ ಶಹಬಾಜ ಎಂಬ ಯುವಕನನ್ನು ಅದೇ ಏರಿಯಾದ ಜುಬೇರ್ ಎಂಬಾತ ತನ್ನ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಅಂಗಡಿ ಮುಚ್ಚಿ ಕುಳಿತಿದ್ದ ಶಹಬಾಜ್ ಮೇಲೆ ಏಕಾಏಕಿ ದಾಳಿ ನಡೆಸಿದ ಆರೋಪಿಗಳು ತಲೆ, ಎದೆ, ಕತ್ತು ಮತ್ತು ಹೊಟ್ಟೆ ಭಾಗಗಳಿಗೆ ನಿರಂತರವಾಗಿ ಚುಚ್ಚಿ ಪರಾರಿಯಾಗಿದ್ದಾರೆ.
ಏರಿಯಾದಲ್ಲಿ ಫೈನಾನ್ಸ್ ಹೆಸರಿನಲ್ಲಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಶಹಬಾಜ್ ವಿರೋಧ ವ್ಯಕ್ತಪಡಿಸಿದ್ದನಂತೆ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಸುಮಾರು ನಾಲ್ಕು ತಿಂಗಳ ಹಿಂದೆ ಶಹಬಾಜ್ ಅಂಗಡಿ ಮುಂದೆ ಗಲಾಟೆ ನಡೆದಿತ್ತು ಎನ್ನಲಾಗಿದೆ.













