

ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತ ಅಮೃತಾ ಗೌಡ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ ಬಳಸಿರುವ ನಿಂದನೀಯ ಭಾಷೆ ತನಿಖೆಗೆ ಅರ್ಹವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ರಾಜೀವ್ ಗೌಡ ವಿರುದ್ಧದ ದಾಖಲಾಗಿ ರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
ತಮ್ಮ ವಿರುದ್ಧ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಕೋರಿ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
ಈಗಾಗಲೇ ಪಕ್ಷದಿಂದ ಶಿಸ್ತುಕ್ರಮದ ಭಾಗವಾಗಿ ಅಮಾನತು ಭೀತಿಯಲ್ಲಿರುವ ಮತ್ತು ತಲೆಮರೆಸಿಕೊಂಡಿರುವ ರಾಜೀವ್ ಗೌಡಗೆ ಕೋರ್ಟ್‌ನಲ್ಲೂ ಹಿನ್ನಡೆಯಾಗಿದೆ.
“ರಾಜೀವ್ ಗೌಡ ಬಳಸಿರುವ ಭಾಷೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ನ್ಯಾಯಪೀಠ, ಕರ್ತವ್ಯನಿರತ ಸರಕಾರಿ ಅಧಿ ಕಾರಿಯೊಬ್ಬರಿಗೆ, ಅದೂ ಮಹಿಳೆಯೊಬ್ಬರಿಗೆ ಧಮಕಿ ಹಾಕಿ ಅವರ ಕರ್ತವ್ಯಪಾಲನೆಗೆ ತಡೆಯೊಡ್ಡಿರುವುದು ಮೇಲ್ನೋಟಕ್ಕೆ ಅಪರಾಧ ಕೃತ್ಯವನ್ನು ಸೂಚಿಸುತ್ತದೆ. ಇದು ತನಿಖೆಗೆ ಅರ್ಹ” ಎಂದು ಕೋರ್ಟ್ ಹೇಳಿದೆ.













