ಗೋವುಗಳನ್ನು ಸಾಕಣೆಗೆಂದು ಖರೀದಿ ಮಾಡಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಣೆ ಮಾಡಲು ಯತ್ನ ಮಾಡಿದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
ಕೇರಳದ ಇನ್ನೂರು ತಳಿಪರಂಬಾ ನಿವಾಸಿ ಪಿ.ಪಿ.ಸಾದಿಕ್ (38) ಮತ್ತು ಅಬ್ದುಲ್ ಅಹಮ್ಮದ್ ತಂಜಲ್ (34) ಬಂಧಿತ ಆರೋಪಿಗಳು.
ಬಂಧಿತರು ತಳಿಪರಂಬಾದಿಂದ ಬಂದು ಪಿರಿಯಾಪಟ್ಟಣ ತಾಲೂಕಿನ ವಿವಿಧ ಕಡೆ ದನ ಕರುಗಳನ್ನು ಖರೀದಿ ಮಾಡಿ ನಡುರಾತ್ರಿ ಸಾಗಿಸುತ್ತಿದ್ದರು. ರಾಸುಗಳನ್ನು ತುಂಬಿಸಿಕೊಂಡು ಅನುಮಾನ ಬರದಂತೆ ಆಲೂಗಡ್ಡೆ ಮೂಟೆಗಳನ್ನು ತುಂಬಿಸಿದ್ದರು.
ಗೋರಕ್ಷಕರು ಇದನ್ನು ತಿಳಿದು ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಕಾಯುತ್ತಿದ್ದರು. ಮುಂಜಾನೆ ಲಾರಿ ತಪಾಸಣೆ ಕೇಂದ್ರದ ಬಳಿ ಬರುತ್ತಿದ್ದಂತೆ ಲಾರಿ ಪರಿಶೀಲನೆ ಮಾಡಿದ್ದು, ಈ ವೇಳೆ 10 ಕ್ಕೂ ಹೆಚ್ಚು ಗೋವುಗಳು ಪತ್ತೆಯಾಗಿದೆ.
ವಿರಾಜಪೇಟೆ ನಗರ ಪೊಲೀಸರು ಸ್ಥಳಕ್ಕೆ ಬಂದಿದ್ದು, ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
