ಉಡುಪಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆಕೆಯ ಬರ್ತ್‌ಡೇ ದಿನ ಯುವಕನೊಬ್ಬ ಚಾಕುವಿನಿಂದ ಇರಿದ ಘಟನೆ ಬ್ರಹ್ಮಾವರದ ಕೊಕ್ಕರ್ಣೆ ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ರಕ್ಷಿತಾ (24) ಚಾಕು ಇರಿತಕ್ಕೆ ಒಳಗಾದ ಯುವತಿ.
ಕಾರ್ತಿಕ್ ನೆರೆಮನೆಯ ಯುವಕನಾಗಿದ್ದು, ನಂತರ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಹಿಳೆಯನ್ನು ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುತ್ತಿಗೆ ಆಧಾರದಲ್ಲಿ ಬ್ರಹ್ಮಾವರದ ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಬಸ್‌ಸ್ಟ್ಯಾಂಡ್‌ಗೆ ನಡೆದುಕೊಂಡು ಹೋಗುವಾಗ ಸರಿಸುಮಾರು 8.30 ರ ವೇಳೆಗೆ ಯುವಕ ಚಾಕುವಿನಿಂದ ಇರಿದಿದ್ದಾನೆ.
ಮದುವೆಯಾಗುವಂತೆ ಯುವಕ ಒತ್ತಾಯ ಮಾಡುತ್ತಿದ್ದು, ಆದರೆ ಆಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಎರಡು ವಾರಗಳಿಂದ ಆತನ ನಂಬರ್ ಕೂಡಾ ಬ್ಲಾಕ್ ಮಾಡಿದ್ದಳು ಎನ್ನಲಾಗಿದೆ. ಸಿಟ್ಟುಗೊಳಗಾದ ಯುವಕ ಈ ಕೃತ್ಯ ಮಾಡಿದ್ದಾನೆ ಎಂದು ವರದಿಯಾಗಿದೆ.
ಹಲವು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಮನೆಯಲ್ಲಿ ಒಪ್ಪಿರಲಿಲ್ಲ. ಕೆಲ ದಿನಗಳ ಹಿಂದೆ ಮದುವೆ ಬಗ್ಗೆ ರಕ್ಷಿತಾ ಮನೆಯವರ ಮುಂದೆಯೂ ಕಾರ್ತಿಕ್ ಪ್ರಸ್ತಾಪಿಸಿದ್ದ.
ಇದನ್ನೂ ಓದಿ:MLA Satish Sail: ಶಾಸಕ ಸತೀಶ್ ಸೈಲ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು
ಮದುವೆಗೆ ಆಕ್ಷೇಪ ಬಂದ ಕಾರಣ ರಕ್ಷಿತಾ, ಕಾರ್ತಿಕ್ ನಂಬರನ್ನು ಬ್ಲಾಕ್ ಮಾಡಿದ್ದಳು, ಇಂದು ರಕ್ಷಿತಾ ಹುಟ್ಟುಹಬ್ಬ ಆಗಿದ್ದರಿಂದ ವಿಶ್ ಮಾಡಲೆಂದು ಮನೆಗೆ ಬಂದ ಕಾರ್ತಿಕ್‌ಗೆ ನಿರಾಕರಣೆ ಮಾಡಿದ್ದಾಳೆ.
ಹಾಗಾಗಿ ಕೋಪಗೊಂಡ ಕಾರ್ತಿಕ್ ಕುತ್ತಿಗೆಗೆ ಚಾಕು ಇರಿದಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
