UP Man Suicide in Mangaluru; ಮಂಗಳೂರಿನಲ್ಲಿ ಸಿಐಎಸ್‌ಎಫ್ ಮಹಿಳಾ ಅಧಿಕಾರಿಯೊಬ್ಬರು ತನ್ನನ್ನು ಲೈಂಗಿಕವಾಗಿ ಬಳಸಿ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಮಾ.3) ರಂದು ನಡೆದಿದೆ.
ಮಂಗಳೂರಿನ ರಾವ್ ಮತ್ತು ರಾವ್ ಸರ್ಕಲ್ ಬಳಿಯ ಲಾಡ್ಜ್‌ನಲ್ಲಿ ವ್ಯಕ್ತಿ ನೇಣಿಗೆ ಶರಣಾಗಿದ್ದಾರೆ. ಉತ್ತರ ಪ್ರದೇಶದ ಗಾಜಿಪುರದ ಅಭಿಷೇಕ್ ಸಿಂಗ್ (40) ಮೃತ ವ್ಯಕ್ತಿ.
ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಸಿಂಗ್ ವೀಡಿಯೋ ರೆಕಾರ್ಡ್ ಮಾಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಐಎಸ್‌ಎಫ್ ಸಹಾಯಕ ಕಮಾಂಡೆಂಟ್ ಮೋನಿಕಾ ಸಿಂಗ್ ತನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ, ದೈಹಿಕ ಸಂಬಂಧ ಬೆಳೆಸಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಅಭಿಷೇಕ್ ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವಸ್ತುಪ್ರದರ್ಶನವೊಂದರಲ್ಲಿ ಭಾಗವಹಿಸಲು ತನ್ನ ಸಹೋದ್ಯೋಗಿಗಳ ಜೊತೆ ಕೆಲವು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದರು. ರಾವ್ ಮತ್ತು ರಾವ್ ವೃತ್ತದ ಬಳಿ ಇರುವ ಲಾಡ್ಜ್‌ನಲ್ಲಿ ತಂಗಿದ್ದರು. ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೋನಿಕಾ ಸಿಂಗ್ ಈಗಾಗಲೇ ವಿವಾಹಿತೆಯಾಗಿದ್ದು, ನನ್ನಲ್ಲಿ ಈ ವಿಷಯ ಮುಚ್ಚಿಟ್ಟು ಸಂಬಂಧ ಬೆಳೆಸಿಕೊಂಡಿದ್ದರು ಎಂದು ಅಭಿಷೇಕ್ ಸಿಂಗ್ ವೀಡಿಯೋದಲ್ಲಿ ಆರೋಪ ಮಾಡಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
