Home » ಮಗನ ‘ಕದಿಯುವ’ ಅಭ್ಯಾಸದಿಂದ ಬೇಸತ್ತ ಪೋಷಕರು, ಸರಪಳಿಯಿಂದ ಬಂಧನ

ಮಗನ ‘ಕದಿಯುವ’ ಅಭ್ಯಾಸದಿಂದ ಬೇಸತ್ತ ಪೋಷಕರು, ಸರಪಳಿಯಿಂದ ಬಂಧನ

0 comments

ನಾಗಪುರ ಜಿಲ್ಲೆಯಲ್ಲಿ 12 ವರ್ಷದ ಬಾಲಕನನ್ನು ಆತನ ಪೋಷಕರು ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ನಡೆದಿದೆ. ದಿನಗೂಲಿ ಕಾರ್ಮಿಕರಾದ ಪೋಷಕರು ಕೆಲಸಕ್ಕೆ ಹೋಗುವ ಮೊದಲು 12 ವರ್ಷದ ಬಾಲಕನನ್ನು ಪ್ರತಿದಿನ ಕಟ್ಟಿಹಾಕುತ್ತಿದ್ದರು ಎಂದು ಮಕ್ಕಳ ಸಹಾಯವಾಣಿ 1098 ರಿಂದ ಪೊಲೀಸರು ಮಾಹಿತಿ ಪಡೆದಿದ್ದರು.

“ಈ ಘಟನೆ ನಾಗ್ಪುರದ ಅಂಜ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಕಳೆದ 3-4 ತಿಂಗಳಿನಿಂದ ಮಗುವನ್ನು ಪ್ರತಿದಿನ ಕಟ್ಟಿಹಾಕಲಾಗುತ್ತಿತ್ತು. ಇದರಿಂದಾಗಿ ಹುಡುಗನ ಕಾಲುಗಳಿಗೆ ಗಾಯಗಳಾಗಿದ್ದವು” ಎಂದು ಪೊಲೀಸರು ತಿಳಿಸಿದ್ದಾರೆ.

“ಪೋಷಕರು ಕೆಲಸಕ್ಕೆ ಹೋದ ನಂತರ ಬಾಲಕ ಸಣ್ಣಪುಟ್ಟ ಕಳ್ಳತನ ಮಾಡಲು ಪ್ರಾರಂಭಿಸಿದ್ದರಿಂದ ಅವನನ್ನು ಕಟ್ಟಿಹಾಕಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಕೆಲಸಕ್ಕೆ ಹೋಗುವಾಗ ಸರಪಳಿಗಳಿಂದ ಕಟ್ಟಿಹಾಕಿ ಹಿಂದಿರುಗಿದ ನಂತರ ಅದನ್ನು ತೆಗೆಯುತ್ತಿದ್ದರು” ಎಂದು ಅವರು ಹೇಳಿದರು.

“ಶುಕ್ರವಾರ ನಮ್ಮ ತಂಡ ಮನೆಗೆ ತಲುಪಿದಾಗ, ಮಗು ಅತ್ಯಂತ ದಯನೀಯ ಸ್ಥಿತಿಯಲ್ಲಿ ಕಂಡುಬಂದಿತು. ಅವನನ್ನು ಸರಪಳಿಯಿಂದ ಬಂಧಿಸಲಾಗಿತ್ತು, ಚಲಿಸಲು ಸ್ಥಳವಿರಲಿಲ್ಲ, ಮತ್ತು ಆಹಾರ ಅಥವಾ ನೀರಿಲ್ಲದೆ ಇರಿಸಲಾಗಿತ್ತು. ಅಂತಹ ಚಿಕ್ಕ ಹುಡುಗನನ್ನು ಇಷ್ಟೊಂದು ಅಮಾನವೀಯ ಶಿಕ್ಷೆಗೆ ಒಳಪಡಿಸಿದಾಗ ಮಗುವಿನ ಸ್ಥಿತಿ ತಂಡವನ್ನು ಆಘಾತಗೊಳಿಸಿತು,” ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮುಷ್ತಕ್ ಪಠಾಣ್ ಹೇಳಿದ್ದಾರೆ

ಅಂಜಿನಿ ಪೊಲೀಸರು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಬಾಲಕನನ್ನು ಮಕ್ಕಳ ಗೃಹಕ್ಕೆ ಕಳುಹಿಸಲಾಗಿದೆ ಮತ್ತು ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲ ನ್ಯಾಯ ಕಾಯ್ದೆ, 2015 ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

You may also like