Home » Fraud Alert: 400 ರೂ. ಐಸ್‌ಕ್ರೀಂಗಾಗಿ ರೂ.40000 ಕಳೆದುಕೊಂಡ ಮಹಿಳೆ!

Fraud Alert: 400 ರೂ. ಐಸ್‌ಕ್ರೀಂಗಾಗಿ ರೂ.40000 ಕಳೆದುಕೊಂಡ ಮಹಿಳೆ!

0 comments

Fraud Alert: ಮಹಿಳೆಯೊಬ್ಬರು ಗೂಗಲ್‌ನಲ್ಲಿ ಸಿಕ್ಕ ಕಸ್ಟಮ‌ರ್ ಕೇರ್ ಸಂಖ್ಯೆಯೊಂದಕ್ಕೆ ಕರೆ ಮಾಡಿ ಸೈಬರ್ ವಂಚಕರಿಂದ ₹40 ಸಾವಿರ ವಂಚನೆಗೆ ಒಳಗಾಗಿದ್ದಾರೆ. ವಂಚನೆಗೆ ಒಳಗಾದ ಅಲಿ ಅಸ್ಕರ್ ರಸ್ತೆಯ ನಿವಾಸಿ ಸುನೀತಾ ಖುರನಾ ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಮಾಹಿತಿ ತಂತ್ರ ಜ್ಞಾನ ಕಾಯ್ದೆಯಡಿ ಕೇಸ್ ದಾಖಲಿಸಿ, ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಸುನೀತಾ ಅವರು ಮಾ.28ರಂದು ಬಿಗ್ ಬಾಸ್ಕೆಟ್ ಆ್ಯಪ್ ನಲ್ಲಿ 2 ಕೆ.ಜಿ. ಕಿತ್ತಲೆ ಹಣ್ಣು, 250 ಗ್ರಾಂ ಕೊತ್ತಂಬರಿ ಸೊಪ್ಪು ಹಾಗೂ 1 ಕೆ.ಜಿ. ಐಸ್‌ಕ್ರೀಂ ಆರ್ಡರ್ ಮಾಡಿದ್ದು, ಆನ್ ಲೈನ್‌ನಲ್ಲಿ ಹಣ ಪಾವತಿಸಿದ್ದಾರೆ. ಅದರಂತೆ ಡೆಲಿವರಿ ಬಾಯ್ 2 ಕೆ.ಜಿ.ಕಿತ್ತಲೆ ಹಣ್ಣು ಹಾಗೂ 250 ಗ್ರಾಂ ಕೊತ್ತಂಬರಿ ಸೊಪ್ಪನ್ನು ಸುನೀತಾ ಅವರ ಮನೆಗೆ ಡೆಲಿವರಿ ನೀಡಿದ್ದಾನೆ. ಐಸ್‌ಕ್ರೀಂ ಬಾರದಿದ್ದಕ್ಕೆ ಗೂಗಲ್‌ನಲ್ಲಿ ಬಿಗ್ ಬಾಸ್ಕೆಟ್ ಕಸ್ಟಮರ್ ಕೇರ್ ಸಂಖ್ಯೆ ಪಡೆದು ಕರೆ ಮಾಡಿದಾಗ, ಚಾಲ್ತಿಯಲ್ಲಿ ಇಲ್ಲ ಎಂಬ ಮಾಹಿತಿ ಬಂದಿದೆ.

ಅವರು ಗೂಗಲ್ ಸರ್ಚ್ ಮಾಡಿ ಜಸ್ಟ್ ಡಯಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಇದು ಬಿಗ್ ಬಾಸ್ಕೆಟ್ ಎಂದು ಹೇಳಿದ್ದಾನೆ. ಸುನೀತಾ ಅವರ ಆರ್ಡರ್ ಬಗ್ಗೆ ಮಾಹಿತಿ ಪಡೆದು 1 ಕೆ.ಜಿ. ಐಸ್‌ಕ್ರೀಂನ ₹400 ಹಣ ವಾಪಾಸ್ ನೀಡುವುದಾಗಿ ಹೇಳಿದ್ದಾನೆ. ಅದರಂತೆ ಮೊಬೈಲ್‌ನಲ್ಲಿ ಕೆಲವು ಆಪ್ಪನ್ ಗಳನ್ನು ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ. ಕ್ಲಿಕ್ ಮಾಡಿದ ಬಳಿಕ ಸುನೀತಾ ಅವರ ಬ್ಯಾಂಕ್ ಖಾತೆಯಿಂದ 40 ಸಾವಿರ ರು. ಹಣ ಕಡಿತವಾಗಿದೆ. ಈ ವೇಳೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ಸುನೀತಾ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may also like