Dining Room Vastu Tips: ಈ ಕಾಲದಲ್ಲಿ ಡೈನಿಂಗ್ ಟೇಬಲ್ ಇಲ್ಲದ ಮನೆ ಸಿಗೋದು ಬಹಳ ಅಪರೂಪ. ಮುಖ್ಯವಾಗಿ ಸೋಫಾ, ಖುರ್ಚಿ, ಡೈನಿಂಗ್ ಟೇಬಲ್ ಮುಂತಾದವುಗಳು ಮನೆಯ ಅಂದವನ್ನು ಇಮ್ಮಡಿಗೊಳಿಸುವ ವಸ್ತುಗಳಾಗಿವೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು ಕೂಡ ವಾಸ್ತುವಿಗೆ ಒಳಪಟ್ಟಿರುತ್ತದೆ. ಹೌದು, ಡೈನಿಂಗ್ ಟೇಬಲ್ ಕೂಡ ವಾಸ್ತು ದೋಷವನ್ನುಂಟು ಮಾಡುವ ಸಾಧ್ಯತೆಯಿರುತ್ತದೆ.
ಆದ್ದರಿಂದ ಮನೆಯ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಲು ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸುವುದು (Dining Room Vastu Tips) ಅತ್ಯಂತ ಅವಶ್ಯಕವಾಗಿದೆ.
ವಾಸ್ತು ಶಾಸ್ತ್ರದಲ್ಲಿ ಮನೆಯ ಅಡುಗೆ ಕೋಣೆಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಪ್ರಾಮುಖ್ಯತೆಯನ್ನು ಊಟ ಮಾಡುವ ಸ್ಥಳಕ್ಕೂ ಒದಗಿಸಲಾಗಿದೆ. ಅಡುಗೆ ಪಕ್ಕದಲ್ಲೇ ಅಥವಾ ಅಡುಗೆ ಕೋಣೆಗೆ ಹೊಂದಿಕೊಂಡಂತೆಯೇ ಡೈನಿಂಗ್ ಹಾಲ್ ಅನ್ನು ನಿರ್ಮಿಸಲಾಗಿರುತ್ತದೆ. ಡೈನಿಂಗ್ ಹಾಲ್ ವಾಸ್ತುವು ಮನೆಯ ಸದಸ್ಯರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ವಾಸ್ತು ಪ್ರಕಾರ ಅಡುಗೆ ಮನೆಯು ಆಗ್ನೆಯ ದಿಕ್ಕಿನಲ್ಲಿರುವುದು ಸೂಕ್ತ. ಅಡುಗೆ ಮನೆಯು ಯಾವುದೇ ಅನಿವಾರ್ಯ ಪರಿಸ್ಥಿತಿಯಲ್ಲಿ ನೈಋತ್ಯ ದಿಕ್ಕಿಗಿರಬಾರದು. ಇದರಿಂದ ಮನೆಯ ಆರ್ಥಿಕ ಸ್ಥಿತಿ ಹದಗೆಡುವುದಲ್ಲದೆ, ಸದಸ್ಯರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗೆಯೇ ಡೈನಿಂಗ್ ಹಾಲ್ ಸಹ ಅಡುಗೆ ಮನೆಯ ಪಕ್ಕದಲ್ಲಿ ಅಥವಾ ಅದಕ್ಕೆ ಹೊಂದಿಕೊಂಡೇ ಇದ್ದರೆ ಉತ್ತಮ. ಹೀಗಿರುವುದು ಸೂಕ್ತವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಡೈನಿಂಗ್ ಹಾಲ್ ನಿರ್ಮಾಣಕ್ಕೆ ಪಶ್ಚಿಮ ದಿಕ್ಕು ಅತ್ಯಂತ ಸೂಕ್ತವಾದ ದಿಕ್ಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮುಖ್ಯವಾಗಿ ದುಂಡನೆಯ ಆಕಾರದ ಡೈನಿಂಗ್ ಟೇಬಲ್ ಇರಬಾರದು. ಇದು ವಾಸ್ತು ಪ್ರಕಾರ ಒಳ್ಳೆಯದಲ್ಲ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹಿರಿಯರು ಅಥವಾ ಯಜಮಾನರು ಪೂರ್ವ ದಿಕ್ಕಿಗೆ ಕುಳಿತುಕೊಳ್ಳಬೇಕು. ಊಟ ಮಾಡುವ ಮೊದಲು ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಅನ್ನಪೂರ್ಣೇಶ್ವರಿಗೆ ನಮಿಸಿ ಆಹಾರ ಸೇವಿಸಲು ಪ್ರಾರಂಭಿಸಬೇಕು.
ಇನ್ನು ಮನೆಗೆ ಶುದ್ಧವಾದ ಗಾಳಿ ಮತ್ತು ಉತ್ತಮ ಬೆಳಕು ಅತ್ಯಂತ ಮುಖ್ಯವಾಗುತ್ತದೆ. ಡೈನಿಂಗ್ ಹಾಲ್ ಕತ್ತಲಾಗಿರಬಾರದು. ಉತ್ತಮ ಬೆಳಕು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಮತ್ತು ಇದರಿಂದ ಮನೆಯ ಸದಸ್ಯರ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ.
ಡೈನಿಂಗ್ ಹಾಲ್ ಬಣ್ಣ ಕಣ್ಣಿಗೆ ತಂಪೆರೆಯುವಂತಿರಬೇಕು. ಹಿಂಸೆ ಮತ್ತು ಕೆಟ್ಟದ್ದನ್ನು ಬಿಂಬಿಸುವ ಬಣ್ಣ ಬಳಸದಿರುವುದು ಉತ್ತಮ. ಹಣ್ಣು ತರಕಾರಿ, ತೋಟ ಮತ್ತು ಸಹಜ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಚಿತ್ರಗಳನ್ನು ಬಳಸುವುದು ಉತ್ತಮ.
ಚೆಂದದ ಹೂವುಗಳಿಂದ ಡೈನಿಂಗ್ ಟೇಬಲ್ ಅನ್ನು ಅಲಂಕರಿಸುವುದರ ಜೊತೆಗೆ ಕಣ್ಣಿಗೆ ಮುದ ನೀಡುವ ಟೇಬಲ್ ಕ್ಲಾತ್ ಉತ್ತಮವಾಗಿದೆ. ಅಷ್ಟೇ ಅಲ್ಲದೆ ಬೇಡದಿರುವ ವಸ್ತುಗಳು ಡೈನಿಂಗ್ ಟೇಬಲ್ ಮೇಲೆ ಇಡಬಾರದು.
ಡೈನಿಂಗ್ ಟೇಬಲ್ ಅನ್ನು ನೇರವಾಗಿ ಮನೆ ಅಥವಾ ಮನೆಯ ಪ್ರವೇಶದ್ವಾರದ ಮುಂದೆ ಇಡಬಾರದು. ತೆರೆದ ಅಡುಗೆಮನೆಯ ಮುಂದೆ ಡೈನಿಂಗ್ ಟೇಬಲ್ ಇಡುವುದು ಅಶುಭವಾಗಿದೆ. ಇಲ್ಲಿ ಡೈನಿಂಗ್ ಟೇಬಲ್ ಇರುವ ಕಾರಣ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತವೆ.
