Leopard Attacks:ಮಹಾರಾಷ್ಟ್ರದ ನಾಸಿಕ್‌ನಲ್ಲಿ ಚಿರತೆಯೊಂದು ರೈತನ ಮೇಲೆ ದಾಳಿ ಮಾಡಿದೆ. ಆಗ ಚಿರತೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ಚಿರತೆ ಹಾಗೂ ರೈತ ಇಬ್ಬರೂ ಬಾವಿಗೆ ಬಿದ್ದು ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆ ಸವ್ತಾ ಮಲಿ ಗ್ರಾಮದಲ್ಲಿ ನಡೆದಿದೆ.
ಸವ್ತಾ ಮಲಿ ಗ್ರಾಮದ ನಿವಾಸಿ ಗೋರಖ್ ಜಾಧವ್ ಸಾವನ್ನಪ್ಪಿದವರು. ಜಾಧವ್ ಅವರು ಮಧ್ಯಾಹ್ನ ತಮ್ಮ ಗೋಧಿ ಬೆಳೆಗೆ ನೀರು ಹಾಕಿ ಹೊಲದಲ್ಲಿ ಕುಳಿತು ಮಧ್ಯಾಹ್ನದ ಊಟ ಸೇವಿಸುತ್ತಿದ್ದ ವೇಳೆ ಚಿರತೆ ಅವರ ಮೇಲೆ ದಾಳಿ ಮಾಡಿದೆ. ಈ ವೇಳೇ ಜಾಧವ್ ಅವರು ಚಿರತೆಯಿಂದ ರಕ್ಷಿಸಿಕೊಳ್ಳಲು ಹೊಡೆದಾಟ ಮಾಡಿದ್ದು, ಈ ಹೋರಾಟದ ಸಮಯದಲ್ಲಿ ಅಲ್ಲೇ ಇದ್ದ ಬಾವಿಗೆ ಚಿರತೆ ಹಾಗೂ ಗೋರಖ್ ಜಾಧವ್ ಅವರು ಬಿದ್ದಿದ್ದಾರೆ. ಈ ವಿಚಾರ ತಿಳಿದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ವ್ಯಕ್ತಿ ಹಾಗೂ ಚಿರತೆಯ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ ಜಾಧವ್ ಅವರ ಸಾವಿನ ಹಿನ್ನೆಲೆಯಲ್ಲಿ ಜನರು ಉದ್ರಿಕ್ತರಾಗಿದ್ದು, ಚಿರತೆಯ ರಕ್ಷಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಅಲ್ಲಿದ್ದ ಜನರ ಮನವೊಲಿಸುವುದಕ್ಕೆ ಯತ್ನಿಸಿದ್ದಾರೆ. ಹೀಗೆ ಜನರನ್ನು ಮಲವೊಲಿಸುವುದರಲ್ಲೇ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಯವರು ಮೂರು ಗಂಟೆಗೂ ಹೆಚ್ಚು ಕಾಲ ವ್ಯಯಿಸಿದ್ದಾರೆ. ಅಷ್ಟರಲ್ಲಿ ಚಿರತೆಯೂ ಕೂಡ ಬಾವಿಗೆ ಬೀಳುವ ವೇಳೆ ಆದ ಗಾಯಗಳಿಂದ ಸಾವನ್ನಪ್ಪಿದೆ.
