New year: ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಮೂರು ನೇಪಾಳಿ ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ.ರೋಹ್ಟಕ್ನ ಕಚಾ ಚಮಾರಿಯಾ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಹೊಸ ವರ್ಷದ ಸಮಯಲ್ಲಿ ಅಡುಗೆ ಮಾಡಲು ಆಗಮಿಸಿದ್ದ ಮೂವರು ನೇಪಾಳಿ ಯುವಕರು ಸಾವನ್ನಪ್ಪಿದ್ದಾರೆ. ಕೊಠಡಿಯಲ್ಲಿ ಬಿಸಿ ಮಾಡಲು ಬಳಕೆ ಮಾಡುವ ಬ್ರೇಜಿಯರ್ನಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಚಾ ಚಮಾರಿಯಾ ರಸ್ತೆಯಲ್ಲಿರುವ ಪಟಾಕಿ ಕಾರ್ಖಾನೆಯ ಬಳಿಯ ಫೌಜಿ ಫಾರ್ಮ್‌ಹೌಸ್‌ನಲ್ಲಿ ಹೊಸ ವರ್ಷದ ಪಾರ್ಟಿ ಆಯೋಜಿಲಾಗಿತ್ತು. ಸೆಕ್ಟರ್ -34 ರ ನಿವಾಸಿ ನರೇಂದ್ರ ಎಂಬುವರು ತನ್ನ ಸ್ನೇಹಿತರೊಂದಿಗೆ ಇಲ್ಲಿ ಪಾರ್ಟಿ ಆಚರಿಸುತ್ತಿದ್ದರು.
ನೇಪಾಳದ ಯೋಗಿ ಕವರ್ ಕಮಲ್, ರಾಜ್ ಮತ್ತು ಸಂತೋಷ್ ಅವರು ಅಡುಗೆ ಮಾಡಲು ಈ ಪಾರ್ಟಿಗೆ ಆಗಮಿಸಿದ್ದರು. ಬುಧವಾರ ತಡರಾತ್ರಿ ಪಾರ್ಟಿ ಮುಗಿದ ಬಳಿಕ ನರೇಂದ್ರ ಮತ್ತು ಅವರ ಸ್ನೇಹಿತರು ಮನೆಗೆ ತೆರಳಿದ್ದು, ಮೂವರು ನೇಪಾಳಿ ಪುರುಷರು ಫಾರ್ಮ್ ಹೌಸ್‌ನಲ್ಲಿಯೇ ಇದ್ದರು. ನೇಪಾಳಿ ಯುವಕರಲ್ಲಿ ಓರ್ವ ಯುವಕನ ಹುಟ್ಟು ಹಬ್ಬ ಕೂಡ ಇತ್ತು. ಪರಿಣಾಮ ಪ್ರತ್ಯೇಕವಾಗಿ ಮತ್ತೆ ಸಂಭ್ರಮಾಚರಣೆ ನಡೆಸಲು ಅಲ್ಲಿಯೇ ತಂಗಿದ್ದರು.
ರಾತ್ರಿ ಊಟವಾದ ಬಳಿಕ ಮೂವರು ಯುವಕರು ತಮ್ಮ ಕೋಣೆಯಲ್ಲಿ ಇದ್ದಿಲಿನ ಬ್ರೆಜಿಯರ್ ಅನ್ನು ಹೊತ್ತಿಸಿ ಮಲಗಿದರು.ಗುರುವಾರ ಸಂಜೆ, ಟೆಂಟ್ ಹೌಸ್ ಉದ್ಯೋಗಿಗಳು ತಮ್ಮ ಉಪಕರಣ ತೆಗೆದುಕೊಳ್ಳಲು ಆಗಮಿಸಿದಾಗ ಮೂವರು ನೇಪಾಳಿ ಪುರುಷರು ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣಕ್ಕೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡ ತನಿಖೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಮೂವರು ವ್ಯಕ್ತಿಗಳು ಕೋಣೆಯಲ್ಲಿ ಇದ್ದಿಲು ಬ್ರೆಜಿಯರ್ನಿಂದ ಸಾವನ್ನಪ್ಪಿರುವುದು ಕಂಡು ಬಂದಿದೆ. ತನಿಖೆಗೆ ಸಹಾಯ ಮಾಡಲು ವಿಧಿವಿಜ್ಞಾನ ತಂಡ ಕೂಡ ಆಗಮಿಸಿತು ಎಂದು ಡಿಎಸ್ಪಿ ಗುಲಾಬ್ ಸಿಂಗ್ ಮಾಹಿತಿ ನೀಡಿದರು.
