School Re-open : 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಪ್ರಕಟವಾಗಿದ್ದು, ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯ ಜೊತೆಗೆ ಸಿಹಿಸುದ್ದಿ ಇಲ್ಲಿದೆ. ಹೌದು, ರಾಜ್ಯ ಸರ್ಕಾರದಿಂದ ಶಾಲಾರಂಭಕ್ಕೆ ಮಾರ್ಗಸೂಚಿ ಪ್ರಕಟವಾಗಿದೆ. ಆ ಪ್ರಕಾರ, ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆಗೆ ಸಿಹಿ ತಿಂಡಿ ಕೂಡ ಹಂಚಲಾಗುತ್ತದೆ.
“ಮೇ. 31 ರಿಂದ ರಾಜ್ಯಾದ್ಯಂತ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿವೆ (School Re-open). ಹಾಗಾಗಿ ಮೇ 29 ಮತ್ತು 30 ರಂದು ಶಾಲೆಗಳನ್ನು ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳು ಸೇರಿದಂತೆ ಇತರೆ ಅಗತ್ಯ ಸಿದ್ಧತೆ ಮಾಡಬೇಕು” ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಹಾಗೇ ಶಾಲೆ ಆರಂಭವಾದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ಕಡ್ಡಾಯವಾಗಿ ಸಿಹಿ-ತಿಂಡಿ ನೀಡುವಂತೆ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚನೆ ನೀಡಿದೆ.
ಇನ್ನು ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದು, ಆ ಪ್ರಕಾರ, ಶಾಲೆಗಳಿಗೆ ತಳಿರು-ತೋರಣ ಕಟ್ಟಿ, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಸಿಹಿ-ತಿಂಡಿ ಹಂಚಿ ಶಾಲೆಗೆ ಖುಷಿಯಿಂದ ಬರ ಮಾಡಿಕೊಳ್ಳಲು ಶಿಕ್ಷಕರು ಸಿದ್ಧರಾಗಿದ್ದಾರೆ.
ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ ಮುನ್ನವೇ ಶೇ 98ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಿದೆ. ಇದು ಮೊದಲ ಬಾರಿಗೆ ಆಗಿದ್ದು, ದಾಖಲೆ ನಿರ್ಮಿಸಿದೆ. ಕಳೆದ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೇರಿದಂತೆ ಪಠ್ಯಪುಸ್ತಕ ಕೂಡ ಸರಿಯಾದ ಸಮಯಕ್ಕೆ ಹಂಚಿಕೆಯಾಗಿರಲಿಲ್ಲ.
