ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದು, ಬ್ಯಾರಕ್‌ನಲ್ಲಿ ಇತರೆ ಆರೋಪಿಗಳ ಜೊತೆಗೆ ರಂಪಾಟ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಘಟನೆಯನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.
ದರ್ಶನ್ ಆರ್ ನಾಗರಾಜ್, ಕಾರು ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್ ಹಾಗೂ ಚಿತ್ರದುರ್ಗದ ಆಟೋ ಚಾಲಕರಾದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಅವರನ್ನು ಜೈಲಿನ ಒಂದೇ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ದರ್ಶನ್ ಅವರು ಆರ್ ನಾಗರಾಜ್ ಹೊರತು ಪಡಿಸಿ ಉಳಿದವರ ಜೊತೆಗೆ ಗಲಾಟೆ, ಅವಾಚ್ಯ ಶಬ್ದಗಳ ನಿಂದನೆ, ಕಾಲಿನಿಂದ ಒದ್ದಿರುವುದಾಗಿ ಹೇಳಲಾಗಿದೆ.
ಆದರೆ ಕಾರಾಗೃಹದ ಎಸ್ ಪಿ ಅಂಶುಕುಮಾರ್ ಅವರು, ದರ್ಶನ್ ಅವರನ್ನು ಇರಿಸಲಾಗಿರುವ ಬ್ಯಾರಕ್‌ನಲ್ಲಿ ಗಲಾಟೆ ನಡೆದಿರುವ ಕುರಿತು ಮಾಹಿತಿ ಇಲ್ಲ. ಗಲಾಟೆ ನಡೆದಿರುವ ವದಂತಿ ಹಬ್ಬಿರುವ ಕಾರಣಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ. ಜೈಲಿನ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
