Home » Bigg Boss Kannada -11: ‘ಕಿಚ್ಚ’ನ ಸುಳಿವಿಲ್ಲದೆ ಪ್ರೋಮ್ ರಿಲೀಸ್ ಮಾಡಿದ ‘ಬಿಗ್ ಬಾಸ್’ – ಈ ಸಲ ‘ದೊಡ್ಮನೆ’ ಆಟ ಆಡಿಸೋದ್ಯಾರು ?!

Bigg Boss Kannada -11: ‘ಕಿಚ್ಚ’ನ ಸುಳಿವಿಲ್ಲದೆ ಪ್ರೋಮ್ ರಿಲೀಸ್ ಮಾಡಿದ ‘ಬಿಗ್ ಬಾಸ್’ – ಈ ಸಲ ‘ದೊಡ್ಮನೆ’ ಆಟ ಆಡಿಸೋದ್ಯಾರು ?!

0 comments

Bigg Biss Kannada-11 ಪ್ರೋಮೊ ರೀಲಿಸ್ ಆಗಿದೆ. ಆದರೆ ಅಚ್ಚರಿ ಏನಂದ್ರೆ ಇದರಲ್ಲಿ ಕಿಚ್ಚ ಸುದೀಪ್ ಸುಳಿವೇ ಇಲ್ಲ !! ಸುದೀಪ್ ನ ಸುದ್ದಿಯೇ ಇಲ್ಲದೆ ಬಿಗ್ ಬಾಸ್ ಮೊದಲ ಪ್ರೋಮೋ ಔಟ್ ಆಗಿದ್ದಕ್ಕೆ ಇಡೀ ಅಭಿಮಾನಿಗಳಲ್ಲಿ, ವೀಕ್ಷಕರಲ್ಲಿ ನಿರಾಸೆ ಮೂಡಿದೆ. ಜೊತೆಗೆ ಕಾತರತೆಯೂ ಹೆಚ್ಚಿದೆ.

ಹೌದು, ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಗ್‌ ಬಾಸ್‌ ಕನ್ನಡ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಕಲರ್ಸ್‌ ಕನ್ನಡ ಈಗಾಗಲೇ ರಿಯಾಲಿಟಿ ಶೋ ಕುರಿತಾದ ಅಪ್‌ಡೇಟ್‌ಗಳನ್ನು ನೀಡಲು ಆರಂಭಿಸಿದೆ. ಆದರೆ ಈ ಸಲ ಬಿಗ್ ಬಾಸ್ ನಲ್ಲಿ ಸದೀಪ್(Kiccha Sudeep) ಇರಲ್ಲ ಎಂಬ ಅನುಮಾನ ಇದೀಗ ಹೆಚ್ಚಾಗಿದೆ. ಇದಕ್ಕೆ ಕಾರಣ ರಿಲೀಸ್ ಆಗಿರುವ ಮೊದಲ ಪ್ರೋಮೋದಲ್ಲಿ ಅಭಿನಯ ಚಕ್ರವರ್ತಿಯ ಸುಳಿವಿಲ್ಲದಿರುವುದು.

ಇದುವರೆಗೂ ಕಿಚ್ಚ ಸುದೀಪ್​ ಅವರು ಕಳೆದ 10 ಸೀಸನ್​ಗಳಿಗೆ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ಕಾರಣ ಬಿಗ್ ಬಾಸ್​ ಎಂದರೆ ಸುದೀಪ್​, ಸುದೀಪ್​ ಎಂದರೆ ಬಿಗ್ ಬಾಸ್​ ಎಂಬ ರೀತಿ ಭಾವನೆ ಎಲ್ಲರಲ್ಲೂ ಮೂಡಿತ್ತು. ಶೋ ನಲ್ಲಿ ಕಿಚ್ಚ ವಾಯ್ಸ್‌ ಕೇಳಿದರೆ ಸಾಕು ಜನರು, ವೀಕ್ಷಕರು ಹುಚ್ಚೇಳುತ್ತಿದ್ದರು. ಅನೇಕರು ಸುದೀಪ್ ನೋಡಲು, ಅವರ ಮಾತು ಕೇಳಲೆಂದೇ ಈ ಶೋ ನೋಡುತ್ತಿದ್ದರು. ಆ ವಾಯ್ಸ್ ಇಲ್ಲದೆ ಬಿಗ್‌ ಬಾಸ್‌ ಕನ್ನಡ ನೆನಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೀಗ ಈ ಸ್ಥಿತಿ ಎದುರಾಗುತ್ತಾ ಎಂಬ ಅನುಮಾನ ಗಟ್ಟಿಯಾಗಿದೆ.

ಇದರ ನಡುವೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ನಲ್ಲಿ ಆಂಕರ್‌ ಆಗಿ ಮುಂದುವರಿಯುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಆ ಬಳಿಕ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ನ ಮೊದಲ ಪ್ರೋಮೋ ಹಂಚಿಕೊಂಡಿದ್ದ ಕಲರ್ಸ್‌ ಕನ್ನಡ, ಅದರಲ್ಲಿ ಕಿಚ್ಚ ಸುದೀಪ್‌ ಅವರ ಹ್ಯಾಶ್‌ಟ್ಯಾಗ್‌ಅನ್ನು ಬಳಕೆ ಮಾಡಿತ್ತು. ಇದರಿಂದಾಗಿ ಈ ಬಾರಿಯೂ ಸುದೀಪ್‌ ಅವರೇ ಶೋನ ನಿರೂಪಕರಾಗಿ ಮುಂದುವರಿಯಲಿದ್ದಾರೆ ಎನ್ನುವುದು ಖಚಿತವಾಗಿತ್ತು. ಆದರೀಗ ಮಂಗಳವಾರ ಹೊಸ ಪ್ರೋಮೋವನ್ನು ಕಲರ್ಸ್‌ ಕನ್ನಡ ಹಂಚಿಕೊಂಡಿದೆ. ‘ ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ; ಬಿಗ್ ಬಾಸ್ ಕನ್ನಡ ಸೀಸನ್ 11’ ಎಂದು 34 ಸೆಕೆಂಡ್‌ನ ಪ್ರೋಮೋ ರಿಲೀಸ್‌ ಮಾಡಿದೆ. ಕಲರ್ಸ್​ ಕನ್ನಡ’ ವಾಹಿನಿಯ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಈ ಪ್ರೋಮೋ ವೈರಲ್​ ಆಗಿದೆ. ಪ್ರೋಮೋದಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿಲ್ಲ. ಅವರಿಗೆ ಸಂಬಂಧಿಸಿದ ಹ್ಯಾಶ್​ ಟ್ಯಾಗ್​ ಕೂಡ ಇಲ್ಲ! ಹಾಗಾಗಿ ವೀಕ್ಷಕರಲ್ಲಿ ಕೌತುಕ ಜಾಸ್ತಿ ಆಗಿದೆ.

ಪ್ರೋಮೋದಲ್ಲಿ ಏನಿದೆ?
‘ನಮಸ್ಕಾರ ಕರ್ನಾಟಕ, ಹೇಗಿದ್ದೀರಾ? 10 ವರ್ಷದಿಂದ ನೋಡ್ತಾನೆ ಇದ್ದೀರಾ? ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕಂದ್ರೆ ಇದು ಹೊಸ ದಶಕ. ಹೊಸ ಆಟ, ಹೊಸ ಅಧ್ಯಾಯ’ ಎಂದು ಹೇಳುವುದರೊಂದಿಗೆ ಅರ್ಧಕ್ಕೆ ನಿಲ್ಲುತ್ತದೆ. ‘ಹಾಗಾದರೆ ಆಂಕರ್‌ ಕೂಡ ಹೊಸಬ್ರಾ..’ ಎಂದು ಮಗು ಪ್ರಶ್ನೆ ಮಾಡುತ್ತದೆ. ಈ ಪ್ರಶ್ನೆ ಕೇಳಿದ ಬೆನ್ನಲ್ಲೇ ವ್ಯಕ್ತಿಯೊಬ್ಬರು ನಗುವ ಸದ್ದು ಕೇಳುತ್ತದೆ. ಅಲ್ಲಿಗೆ ಪ್ರೋಮೋ ಮುಕ್ತಾಯ ಕಂಡಿದೆ. ಇದು ಜನರನ್ನು ಇನ್ನೂ ಕುತೂಹಲಕ್ಕೆ ತಳ್ಳಿದೆ.

ಈ ಪ್ರೋಮೋಗೆ ಅನೇಕರು ಕಮೆಂಟ್​ ಮಾಡಿದ್ದಾರೆ. ‘ಆ್ಯಂಕರ್​ ಚೇಂಜ್​ ಮಾಡಬೇಡಿ’ ಎಂದು ಕಿಚ್ಚ ಸುದೀಪ್​ ಫ್ಯಾನ್ಸ್​ ಮನವಿ ಮಾಡಿದ್ದಾರೆ. ಸುದೀಪ್​ ಅಲ್ಲದೇ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ‘ರಿಷಬ್​ ಶೆಟ್ಟಿ ಅವರು ನಿರೂಪಣೆ ಮಾಡ್ತಾರೆ’ ಎಂದು ಕೆಲವರು ಊಹಿಸಿದ್ದಾರೆ. ರಿಷಬ್ ಶೆಟ್ಟಿ ಅವರನ್ನು ಟ್ಯಾಗ್​ ಮಾಡಿ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ.

ಮೂಲಗಳ ಪ್ರಕಾರ, ಕಿಚ್ಚ ಸುದೀಪ್‌ ಅವರ 10 ವರ್ಷಗಳ ಬಿಗ್‌ ಬಾಸ್‌ ಒಪ್ಪಂದ ಮುಕ್ತಾಯವಾಗಿದೆ. ಆದರೆ, ಇನ್ನೊಂದಷ್ಟು ವರ್ಷಗಳ ಕಾಲ ಬಿಗ್‌ ಬಾಸ್‌ನ ಆಂಕರ್‌ ಆಗಿ ಸುದೀಪ್‌ ಅವರೇ ಮುಂದುವರಿಯುವ ಸಾಧ್ಯತೆ ಇದೆ. ಹಾಗೇನಾದರೂ ಸುದೀಪ್‌ ಬಿಗ್‌ ಬಾಸ್‌ನ ಆಂಕರಿಂಗ್‌ ಮುಕ್ತಾಯ ಮಾಡುತ್ತಾರೆ ಎಂದಾದಲ್ಲಿ ಕಲರ್ಸ್ ಕನ್ನಡ ಇಷ್ಟೆಲ್ಲಾ ಸಸ್ಪೆನ್ಸ್‌ ಅನ್ನು ಮಾಡೋದೇ ಇಲ್ಲ ಎಂಬುದನ್ನೂ ಗಮನದಲ್ಲಿಡಬೇಕು. ಬಿಗ್‌ ಬಾಸ್‌ನಲ್ಲಿ ಸುದೀಪ್‌ ಅವರೇ ಆಂಕರ್‌ ಆಗಿ ಮುಂದುವರಿಯಲಿದ್ದು, ಬಿಗ್‌ ಬಾಸ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವ ದೃಷ್ಟಿಯಲ್ಲಿ ಇಂಥದ್ದೊಂದು ಪ್ರೋಮೋ ರಿಲೀಸ್‌ ಮಾಡಿರಬಹುದು ಎನ್ನಲಾಗಿದೆ.

 

You may also like

Leave a Comment