Mahalakshmi Ravindar: ಲಿಬ್ರಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಸಿನಿಮಾಗಳನ್ನು ನಿರ್ಮಿಸುತ್ತಿರುವ ರವೀಂದರ್ ಚಂದ್ರಶೇಖರ್ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ. ಇವರು ಇತ್ತೀಚೆಗಷ್ಟೇ ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ಮದುವೆಯಾಗಿ ಲೈಮ್‌ಲೈಟ್‌ನಲ್ಲಿ ಸುದ್ದಿಯಾಗುತ್ತಿದ್ದರು. ಹಾಗೆನೇ ಇವರು ಇತ್ತೀಚೆಗೆ ಇನ್ನೊಂದು ವಿಚಾರಕ್ಕೆ ಬಹಳ ಸುದ್ದಿಯಾದ್ರು.
2021ರಲ್ಲಿ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಬಾಲಾಜಿ ಎಂಬುವವರನ್ನು ಪಾಲುದಾರನಾಗಿ ಸೇರಿಸಿಕೊಳ್ಳುವುದಾಗಿ ಹೇಳಿ 16 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ರವೀಂದರ್ ಚಂದ್ರಶೇಖರನ್ ವಿರುದ್ಧ ದೂರು ಕೇಳಿ ಬಂದಿತ್ತು. ಇದರ ವಿಚಾರವಾಗಿ ತನಿಖೆ ನಡೆಯುತ್ತಿದ್ದು, ದೂರುದಾರರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರವೀಂದರ್ ಅವರನ್ನು ಬಂಧಿಸಿದ್ದಾರೆ.
ಈ ವೇಳೆ ರವೀಂದರ್ ಅವರ ಪತ್ನಿ ನಟಿ ಮಹಾಲಕ್ಷ್ಮಿಅವರು ಗಂಡನನ್ನು ಜೈಲಿನಿಂದ ಬಿಡುಗಡೆ ಮಾಡಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ ಪ್ರಯೋಜನವಾಗುತ್ತಿಲ್ಲ. ಕಾನೂನು ಹೋರಾಟ ಮುಂದುವರಿದಿದೆ.
ತನ್ನ ಪತಿ ಜೈಲು ಕಂಬಿಯ ಹಿಂದೆ ಇರುವುದನ್ನು ನೋಡಿ ಮಹಾಲಕ್ಷ್ಮಿ ಕಣ್ಣೀರು ಹಾಕಿದ್ದಾರೆ. ಅಲ್ಲದೆ ತನ್ನ ಪತಿಯನ್ನು ನಿರಾಪರಾಧಿ ಎಂದು ಸಾಬೀತು ಪಡಿಸಲು ಹರ ಸಾಹಸ ಪಡುತ್ತಿದ್ದಾರೆ.
ಪತಿಗೆ ಜೈಲಿನಲ್ಲಿ ವಿಐಪಿಗಳಿಗೆ ನೀಡುವ ಎ ಕ್ಲಾಸ್ ಸೆಲ್ ನೀಡಬೇಕು ಎಂದು ಆಗ್ರಹಿಸಿ ಮಹಾಲಕ್ಷ್ಮಿ ಎಗ್ಮೋರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಜಾಮೀನು ಕೋರಿ ಮತ್ತೊಂದು ಅರ್ಜಿ ಕೂಡಾ ಸಲ್ಲಿಕೆ ಮಾಡಿದ್ದಾರೆ. ಆದರೆ ನ್ಯಾಯಾಲಯ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ. ಇದರಿಂದ ರವೀಂದರ್ ಅವರು ಇನ್ನಷ್ಟು ದಿನ ಜೈಲಿನಲ್ಲಿ ಕಳೆಯಬೇಕಾಗಿದೆ.
