Actor Upendra: ಸ್ಯಾಂಡಲ್ ವುಡ್ ನಟ, ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ (Actor Upendra) ಅವರು ಲೈವ್ ವಿಡಿಯೋದಲ್ಲಿ ಮಾತನಾಡುವಾಗ ‘ಊರು ಅಂದ್ಮೇಲೆ ಹೋಲಗೇರಿ ಇರುತ್ತೆ’ ಎಂದು ಗಾದೆ ಮಾತನ್ನು ಬಳಸಿದ್ದರು. ಆ ಮೂಲಕ ದಲಿತ ಸಮುದಾಯದ ಜನರಿಗೆ ಅವಮಾನ ಮಾಡಿದ್ದಾರೆ ಎನ್ನಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉಪೇಂದ್ರ ವಿರುದ್ಧ ದಲಿತ ಸಮುದಾಯ ಸೇರಿದಂತೆ ಸಾಮಾಜಿಕ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಿಸಲಾಗಿದೆ. ಆದರೆ, ಇದೀಗ ಉಪೇಂದ್ರ ಪೊಲೀಸರ ಕೈಗೆ ಸಿಗುತ್ತಿಲ್ಲ.
ಹೌದು, ಉಪೇಂದ್ರ ಅವರ ವಿರುದ್ದ ಬೆಂಗಳೂರಿನ (Bengaluru) ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಅವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಉಪೇಂದ್ರನಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಆದರೆ, ನಟ ಉಪೇಂದ್ರ ಪೊಲೀಸರ ಕೈಗೆ ಸಿಗುತ್ತಿಲ್ಲ. ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಪೇಂದ್ರ ಮನೆಗೆ ಪೊಲೀಸರು ಬಂದಿದ್ದು, ಮನೆಯಲ್ಲಿ ಉಪೇಂದ್ರ ಅವರು ಕಂಡುಬಂದಿಲ್ಲ. ಪೊಲೀಸರು ಸ್ಥಳ ಮಹಾಜರ್ ಮಾಡಲು ಉಪೇಂದ್ರ ಮನೆಗೆ ಬಂದಿದ್ದು, ವೈರಲ್ ಆದ ವಿಡಿಯೋದಲ್ಲಿ ಕಂಡು ಬರುವ ಸ್ಥಳದ ಮಹಜರು ನಡೆಯಲಿದೆ. ಆದರೆ ಉಪೇಂದ್ರ ಅವರು ಯಾರ ಕೈಗೂ ಸಿಗದೆ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡು ಕೂತಿರುವುದು ಸದ್ಯದ ಮಟ್ಟಿಗೆ ಬ್ರೇಕಿಂಗ್ ನ್ಯೂಸ್.
