ಕರಾವಳಿಯ ಭೂತಕೋಲ, ಕಂಬಳವನ್ನೇ ಜೀವಾಳವಾಗಿಟ್ಟುಕೊಂಡು ಮಾಡಿದ ಇತ್ತೀಚೆಗೆ ಎಲ್ಲಾ ಕಡೆ ತನ್ನ ಹವಾ ಎಬ್ಬಿಸಿರುವ ಸಿನಿಮಾವೇ ಕಾಂತಾರ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಕರ್ನಾಟಕ ಮಾತ್ರವಲ್ಲದೇ ಪರ ರಾಜ್ಯ ಹಾಗೂ ವಿದೇಶಗಳಲ್ಲಿಯೂ ತನ್ನ ಮೆಚ್ಚುಗೆಯನ್ನು ಪಡೆದಿದೆ. ಜನರಲ್ಲಿ ಕಾಂತಾರ ಚಿತ್ರದ ಜಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗೆ ನೋಡಿದರೆ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸಿ ಹೊರಬಂದ ಯಾವೊಬ್ಬ ಪ್ರೇಕ್ಷಕ ಈ ಸಿನಿಮಾದ ಗುಂಗಿನಿಂದ ಹೊರಬರುತ್ತಿಲ್ಲ. ಹಾಗೂ ಈ ಚಿತ್ರದ ಕುರಿತು ಯಾವುದೇ ರೀತಿಯ ಮೈನಸ್ ಪಾಯಿಂಟ್ ಹೇಳ್ತಿಲ್ಲ.
ಹೀಗೆ ಚಿತ್ರ ಸಿನಿ ಪ್ರೇಕ್ಷಕನಿಗೆ ಸಂಪೂರ್ಣವಾಗಿ ಇಷ್ಟವಾಗಿದ್ದು, ಮೊದಲಿಗೆ ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರವನ್ನು ಕನ್ನಡ ಭಾಷೆಯಲ್ಲಿಯೇ ವೀಕ್ಷಿಸಿದ ಬೇರೆ ರಾಜ್ಯಗಳ ಸಿನಿಪ್ರೇಮಿಗಳು ಚಿತ್ರವನ್ನು ತಮ್ಮ ಭಾಷೆಗೂ ಸಹ ಡಬ್ ಮಾಡಿ ಇಲ್ಲಿಯ ಸಿನಿರಸಿಕರೂ ಒಂದೊಳ್ಳೆ ಚಿತ್ರವನ್ನು ವೀಕ್ಷಿಸಲಿ ಎಂದು ಬೇಡಿಕೆ ಇಟ್ಟಿದ್ದರು. ಹೀಗೆ ಕಾಂತಾರ ಚಿತ್ರದ ಡಬ್ಬಿಂಗ್ ಕುರಿತು ವ್ಯಾಪಕ ಮನವಿ ಬಂದ ಕಾರಣ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಇದೀಗ ಡಬ್ ಮಾಡಿ ಮುಗಿಸಿದೆ.
ಕಾಂತಾರ ತೆಲುಗು ಹಾಗೂ ಹಿಂದಿ ವರ್ಷನ್ ನಲ್ಲಿಯೂ ಬಿಡುಗಡೆಗೊಳ್ಳಲಿದೆ. ಈ ಚಿತ್ರ ಭಾರತ ಮಾತ್ರವಲ್ಲದೆ ವಿದೇಶಿ ನೆಲದಲ್ಲಿಯೂ ಸಹ ಮೊದಲನೇ ವಾರವನ್ನು ಪೂರೈಸಿ ತನ್ನ ಓಟ ಮುಂದುವರಿಸಿದೆ. ಉತ್ತರ ಅಮೆರಿಕ ಹಾಗೂ ಇಂಗ್ಲೆಂಡ್ ನೆಲೆಗಳಲ್ಲಿ ಕಾಂತಾರ ಎರಡನೇ ವಾರಕ್ಕೆ ಲಗ್ಗೆ ಇಟ್ಟಿದೆ. ವಿದೇಶದಲ್ಲಿ ನೆಲೆಸಿದ ಕನ್ನಡ ಸಿನಿ ಪ್ರೇಮಿಗಳು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯಗಳನ್ನು, ಹರ್ಷವನ್ನು ಮನತುಂಬಿ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದಲ್ಲಿರುವ ಸಿನಿ ಪ್ರೇಕ್ಷಕರೋರರ್ವರು ಟ್ವೀಟ್ ಮಾಡಿ, ಕನ್ನಡ ಚಿತ್ರಗಳನ್ನು ವೀಕ್ಷಿಸಬೇಕೆಂದರೆ 200ರಿಂದ 300 ಕಿಲೋ ಮೀಟರ್ ಪ್ರಯಾಣ ಕೈಗೊಳ್ಳಬೇಕಾದ ಕಾಲವಿತ್ತು. ಆದರೆ ಕಾಂತಾರ ಚಿತ್ರವನ್ನು ನಾನು ಪ್ರತಿದಿನವೂ ವೀಕ್ಷಿಸಬಹುದಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಾಂತಾರ ಅಮೆರಿಕದ ಕನ್ನಡ ಸಿನಿ ಪ್ರೇಕ್ಷಕರಿಗೆ ಸುಲಭವಾಗಿ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನೋರ್ವ ಅಭಿಮಾನಿ ವಾರ ಕಳೆದ ನಂತರವೂ ವೀಕ್ಷಿಸುವುದಕ್ಕೆ ಚಿತ್ರ ಲಭ್ಯವಿದೆ ಎಂದು ಹೇಳಿದ್ದು, ಕಾಂತಾರ ಇಂಗ್ಲೆಂಡ್ ನೆಲದಲ್ಲಿ ಯಶಸ್ವಿ ಪ್ರದರ್ಶನವಾಗುತ್ತಿರುವುದರ ಬಗ್ಗೆ ಟ್ವೀಟ್ ಮಾಡಿದ್ದಾರೆ.
