ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದ, ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ 1 ಇದೀಗ ಆಸ್ಕರ್ ಅಂಗಳಕ್ಕೆ ಕಾಲಿಟ್ಟಿದೆ. ಇದರ ಜೊತೆಗೆ ಆನಿಮೇಟೆಡ್ ವಿಭಾಗದಲ್ಲಿ ಮಹಾವತಾರ್ ನರಸಿಂಹ ಚಿತ್ರ ಕೂಡಾ ಅದಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ನಿಜಕ್ಕೂ ಹೆಮ್ಮೆಯ ಕ್ಷಣ.
ಜ.22 ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ. ಮಾ.15 ರಂದು ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡ 5 ಭಾರತೀಯ ಚಿತ್ರಗಳಲ್ಲಿ 2 ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಸಿನಿಮಾವಾಗಿದೆ.
ಅತ್ಯುತ್ತಮ ಚಿತ್ರ ವಿಭಾಗ: ಈ ಎರಡೂ ಚಿತ್ರಗಳು ಆಸ್ಕರ್‌ನ ಅತ್ಯಂತ ಪ್ರತಿಷ್ಠಿತ ವಿಭಾಗವಾದ ‘ಅತ್ಯುತ್ತಮ ಚಿತ್ರ’ (Best Picture) ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿವೆ. ಇದು ಹೊಂಬಾಳೆ ಫಿಲ್ಮ್ಸ್ ಕಥೆಗಳ ಶಕ್ತಿ ಮತ್ತು ಜಾಗತಿಕ ಗುಣಮಟ್ಟಕ್ಕೆ ಸಂದ ಗೌರವವಾಗಿದೆ.
ಅನಿಮೇಷನ್ ಲೋಕದ ಕ್ರಾಂತಿ: ಮಹಾವತಾರ ನರಸಿಂಹ’ ಚಿತ್ರವು ‘ಅತ್ಯುತ್ತಮ ಚಿತ್ರ’ ಮಾತ್ರವಲ್ಲದೆ, ‘ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್’ ವಿಭಾಗದಲ್ಲೂ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಆ ಮೂಲಕ ಈ ವಿಭಾಗದಲ್ಲಿ ಆಯ್ಕೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರ ಎಂಬ ಇತಿಹಾಸ ಬರೆದಿದೆ
ಹೊಂಬಾಳೆ ಫಿಲ್ಮ್ಸ್ ಸಾಧನೆ: ಈ ವರ್ಷ ಆಸ್ಕರ್‌ನ ಸಾಮಾನ್ಯ ಪಟ್ಟಿಯಲ್ಲಿರುವ ಭಾರತದ ಕೇವಲ ಐದು ಚಿತ್ರಗಳ ಪೈಕಿ ಎರಡು ಚಿತ್ರಗಳು ಹೊಂಬಾಳೆ ಸಂಸ್ಥೆಯದ್ದಾಗಿರುವುದು ಗಮನಾರ್ಹ.
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ತನ್ನ ಸಾಂಸ್ಕೃತಿಕ ಬೇರುಗಳ ಮೂಲಕ ಜಗತ್ತನ್ನು ಸೆಳೆದಿದ್ದರೆ, ಅಶ್ವಿನ್ ಕುಮಾರ್ ನಿರ್ದೇಶನದ ‘ಮಹಾವತಾರ ನರಸಿಂಹ’ ತನ್ನ ದೃಶ್ಯ ವೈಭವದ ಮೂಲಕ ಹೊಸ ಸಂಚಲನ ಮೂಡಿಸಿದೆ. ಈ ಎರಡೂ ಚಿತ್ರಗಳು ಈಗ ಆಸ್ಕರ್‌ನ ಪ್ರಮುಖ ವಿಭಾಗಗಳಾದ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ, ಛಾಯಾಗ್ರಹಣ ಮತ್ತು ಚಿತ್ರಕಥೆ ವಿಭಾಗಗಳಲ್ಲೂ ಸ್ಪರ್ಧೆಗೆ ಇಳಿಯಲಿವೆ.
ಭಾರತೀಯ ಕಥೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಗರಿಷ್ಠ ಗುಣಮಟ್ಟದೊಂದಿಗೆ ಕೊಂಡೊಯ್ಯುತ್ತಿರುವ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಫಿಲ್ಮ್ಸ್‌ಗೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
