Dr.Bro: ನಮಸ್ಕಾರ ದೇವ್ರು.. ಇದನ್ನು ಕೇಳಿದ ಕೂಡಲೇ ನಿಮ್ಮ ತಲೆಯಲ್ಲಿ ಒಬ್ಬನ ಮುಖ ನೆನೆಪಿಗೆ ಬರುತ್ತೆ. ಆತನ ಮಾತುಗಳು, ಆತನ ವಿಡಿಯೋ (Videos) ಗಳಿಂದ ಬೇರೆ ಬೇರೆ ದೇಶಗಳಲ್ಲೂ ಕನ್ನಡ(Kannada)ದ ಕಂಪು ಹರಿಸುತ್ತಿರೋ ವ್ಯಕ್ತಿ ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಆತ ಇನ್ಯಾರು ಬೇರೆ ಅಲ್ಲ ಡಾ.ಬ್ರೋ (Dr.Bro). ಹೌದು, ಯುಟ್ಯೂಬ್(YouTube)ನಲ್ಲಿ ಡಾ .ಬ್ರೋ ಅಂತಾನೆ ಫೇಮಸ್ (Famous) ಆಗಿರುವ ಈ ಯುವಕ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ (World) ತೋರಿಸುತ್ತಾನೆ. ಈಗಂತೂ ಡಾ.ಬ್ರೋ ಕನ್ನಡಿಗರ ಮನದಲ್ಲಿ ಭದ್ರವಾಗಿ ನೆಲೆಯೂರಿ ಎಲ್ಲರ ಮನೆ ಮಾತಾಗಿದ್ದಾರೆ. ಆದರೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಡಾ. ಬ್ರೋ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರಂತೆ!
ಹೌದು, ಯೂಟ್ಯೂಬ್‌ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿ, ಇದೀಗ ನಾಡಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರೋ, ಪ್ರತಿದಿನ ಕೂಡ ದೇಶ ವಿದೇಶ ಸುತ್ತುತ್ತ, ತಮ್ಮದೇ ಆದ ವಿಡಿಯೋಗಳ ಮೂಲಕವೇ ರಂಜಿಸುತ್ತ ಮಾಹಿತಿಯ ಹೂರಣವನ್ನೇ ಉಣಬಡಿಸುವ ಡಾ. ಬ್ರೋ (Dr.Bro) ಅಲಿಯಾಸ್ ಗಗನ್ ಶ್ರೀನಿವಾಸ್ (Gagan Srinivas), ಇದೀಗ ಸಿನಿಮಾದಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ. ಹಾಗಿದ್ರೆ ಯಾವುದು ಆ ಸಿನೆಮಾ ಗೊತ್ತಾ?
ವಿಡಿಯೋ ಮೂಲಕ ಎಲ್ಲರ ಮಸ್ತಕ ತುಂಬಿಸುತ್ತಾ, ರಂಜಿಸುತ್ತ ಜನರ ಪ್ರೀತಿ ಗಳಿಸಿರೋ ಡಾ. ಬ್ರೋ ಇದೀಗ ಸದ್ದಿಲ್ಲದೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ. ಯಸ್, ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನಾಧರಿಸಿದ ಡೇರ್ ಡೆವಿಲ್ ಮುಸ್ತಾಫ ಸಿನಿಮಾದಲ್ಲಿ ಡಾ. ಬ್ರೋ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಯಾಕೆಂದ್ರೆ ಈಗಾಗಲೇ ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಆ ಟ್ರೇಲರ್‌ಗೆ ಡಾ. ಬ್ರೋ ಧ್ವನಿ ನೀಡಿದ್ದಾರೆ. 3 ನಿಮಿಷದ ಟ್ರೇಲರ್‌ನಲ್ಲಿ ಆರಂಭದಿಂದ ಕೊನೇ ವರೆಗೂ ಡಾ. ಬ್ರೋ ತಮ್ಮದೇ ಶೈಲಿಯಲ್ಲಿ ಅಬಚೂರಿನ ಕಹಾನಿಯನ್ನು ಹೇಳುತ್ತ ಹೋಗಿದ್ದಾರೆ. ಸಿನಿಮಾ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಡೇರ್ ಡೇವಿಲ್ ಮುಸ್ತಾಫಾ ಕಥೆಯನ್ನಾಧರಿಸಿದ ಈ ಸಿನಿಮಾ ಶಶಾಂಕ್ ಸೊಗಲ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೇ ಮೇ 19ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಅಂದಹಾಗೆ ಡಾಕ್ಟರ್ ಬ್ರೋ ಹೆಸರು ಗಗನ್. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು. ಈತ ಹುಟ್ಟಿದ್ದು ಮದ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ. ಈತನ ತಂದೆಯ ಹೆಸರು ಶ್ರೀನಿವಾಸ್. ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಈ ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ. ತಂದೆ ಇಲ್ಲದ ಸಮಯದಲ್ಲಿ ತಾನೇ ದೇವಸ್ಥಾನದ ಪೂಜೆ ಮಾಡುತ್ತಿದ್ದ. 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್ ಚಾನೆಲ್ ಶುರು ಮಾಡಿದ್ದ. ಅದುವೇ ಡಿ ಆರ್ ಬ್ರೋ ಅಂದರೆ ಡಾ ಬ್ರೋ. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದ. ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ ವಿವರ ಕೊಡಲು ಶುರುಮಾಡಿದ್ದ, ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತಿ ಎಲ್ಲರನ್ನು ರಂಜಿಸಲು ಪ್ರಾರಂಭಿಸಿದ.
ಇನ್ನು ಗಗನ್ ಶ್ರೀನಿವಾಸ್ (Dr Bro). ವಯಸ್ಸು ಈಗಿನ್ನೂ 23. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಹತ್ತಾರು ದೇಶ ಸುತ್ತಿ, ಕರುನಾಡಿನ ಮಂದಿಗೆ ಕುಳಿತಲ್ಲೇ ಪ್ರಪಂಚ ಪರ್ಯಟನೆ ಮಾಡಿಸುತ್ತಿದ್ದಾರೆ ಈ ಡಾಕ್ಟರ್! ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸರಣಿ ವಿಡಿಯೋ ಹಂಚಿಕೊಳ್ಳುತ್ತ, ವಿದೇಶದ ಆಚರಣೆ, ಆಹಾರ ಪದ್ಧತಿ, ಅಲ್ಲಿನ ಸಣ್ಣ ಸಣ್ಣ ಕೌತುಕಗಳನ್ನೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದ ಯಾವೊಬ್ಬ ವ್ಲಾಗರ್ ಹೋಗದ ಸ್ಥಳಗಳಿಗೂ ಹೋಗಿ ಅಲ್ಲಿನ ಅಚ್ಚರಿಗಳನ್ನು ಕರ್ನಾಟಕದ ಜನತೆಗೆ ಉಣಬಡಿಸುತ್ತಿದ್ದಾರೆ ಗಗನ್. ಆಫ್ರಿಕಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಇಂಡೋನೇಷ್ಯಾ, ಯೂರೋಪ್ ಹೀಗೆ 10ಕ್ಕೂ ಹೆಚ್ಚು ದೇಶ ಸುತ್ತಾಡಿದ ಡಾ ಬ್ರೋ ಇತ್ತೀಚೆಗಷ್ಟೇ ಈಜಿಪ್ಟ್‌ಗೂ ತೆರಳಿ ಪಿರಮಿಡ್‌ಗಳ ಬಗ್ಗೆ ನೋಡುಗರಿಗೆ ಮಾಹಿತಿ ನೀಡಿದ್ದರು.
ಹೀಗೆ ದೇಶ ವಿದೇಶದ ಮಾಹಿತಿಯನ್ನು ಅಂಗೈನಲ್ಲಿಯೇ ಒದಗಿಸುವ ಈ ಹುಡುಗನನ್ನು ವೀಕೆಂಡ್ ವಿಥ್ ರಮೇಶ್ ಶೋನಲ್ಲಿಯೂ ನೋಡಬೇಕೆಂದು ಸಾಕಷ್ಟು ಮಂದಿ ಆಸೆಪಟ್ಟಿದ್ದರು. ಜೀ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿಯೂ ಡಾ. ಬ್ರೋ ಅವರನ್ನು ಕರೆಸಿ ಎಂದು ಮನವಿ ಮಾಡಿದ್ದರು. ಸದ್ಯಕ್ಕಿಲ್ಲ, ಮುಂದಿನ ದಿನಗಳಲ್ಲಿ ಆ ಕೆಲಸ ಮಾಡಲಾಗುವುದು ಎಂದು ವಾಹಿನಿ ಹೇಳಿಕೆ ನೀಡಿತ್ತು.
ತಿಂಗಳಿಗೆ ಒಂದೂವರೆ ಲಕ್ಷ ದುಡಿತಾರಾ ಡಾ ಬ್ರೋ! : ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ ಖ್ಯಾತಿ ಗಗನ್ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್ ಒಂದೇ ಒಂದು ರೂಪಾಯಿ ತನ್ನ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ 800 ಡಾಲರ್ ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
