ಹಾವು ನೋಡಿದರೆ ಸಾಕು, ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರಿದ್ದಾರೆ. ಹಾವು ನೋಡಿ ಭಯಗೊಳ್ಳುವವರೂ ನಮ್ಮಲ್ಲಿ ಹೆಚ್ಚೇ. ಅಲ್ಲದೇ, ಸುಖಾ ಸುಮ್ಮನೆ ಅದನ್ನು ಹಾನಿ ಮಾಡುವವರೂ ನಮ್ಮಲ್ಲೇನೂ ಕಮ್ಮಿ ಇಲ್ಲ.
ಆದರೆ ಹಾವು ಕಂಡರೆ ಒಮ್ಮೆಲೆ ಎಂಥವರ ಕೈ ಕಾಲು ಕೂಡಾ ನಡುಗಿ ಬಿಡುತ್ತದೆ. ಹಾವೆಂದರೆ ಸಾಕು ಮನಸ್ಸಿನಲ್ಲಿ ವಿಚಿತ್ರ ಭಯ ಕಾಡುತ್ತದೆ. ಹಾವನ್ನು ಮುಟ್ಟುವುದಿರಲಿ, ಅದರತ್ತ ನೋಡುವ ಧೈರ್ಯ ಕೂಡಾ ಮಾಡಲು ಹೋಗುವುದಿಲ್ಲ. ಆದರೆ, ಈ ವೈರಲ್ ವಿಡಿಯೋದಲ್ಲಿ 2 ವರ್ಷದ ಮಗು ವಿಷಪೂರಿತ ಹಾವಿನೊಂದಿಗೆ ಸರಾಗವಾಗಿ ಆಟವಾಡುತ್ತಿದೆ.
ಈ ಮಗುವಿನ ತಂದೆ, ಮಗು ಹಾವಿನೊಂದಿಗೆ ಆಟವಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದವರಿಗೆ ಆಶ್ಚರ್ಯ, ಆಘಾತ ಒಟ್ಟಿಗೆ ಆಗುವುದು ಸಹಜ. ಹಾವು ಕಂಡಾಗ ಮೈಲಿ ದೂರ ಓಡುವ ನಮಗೆ 2 ವರ್ಷದ ಕಂದಮ್ಮನ ಈ ವಿಡಿಯೋ ನೋಡಿದರೆ ಮೈ ಜುಮ್ಮೆನಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಿಸಲಾಗಿದೆ. ಈ ಮಗುವಿನ ತಂದೆ, ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತನ್ನ ಎರಡು ವರ್ಷದ ಮಗು ಹಾವಿನೊಂದಿಗೆ ಆಟವಾಡುತ್ತಿರುವ ಬಗ್ಗೆ ಅವರಿಗೂ ಹೆಮ್ಮೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ , ಮಗು ಹಾವಿನ ಬಾಲವನ್ನು ಹಿಡಿದು ಎಳೆಯುವುದನ್ನು ಕಾಣಬಹುದು. ಹಾವಿನೊಂದಿಗೆ ಆಟವಾಡುತ್ತಿರುವ ವೇಳೆ, ಮಗುವಿನ ಮುಖದಲ್ಲಿ ಕಿಂಚಿತ್ತೂ ಭಯ ಎನ್ನುವುದು ಕಾಣುವುದೇ ಇಲ್ಲ. ಸುಮಾರು ಎರಡು ಮೀಟರ್ ಉದ್ದದ ಹಾವನ್ನು ಈ ಪುಟ್ಟ ಪೋರ ನಿಯಂತ್ರಿಸುತ್ತಿರುವುದು ನೋಡಿದರೆ, ಮಗುವಿಗೆ ಈ ಕಲೆ ಕರಗತವಾಗಿದೆ ಅನ್ನಿಸುತ್ತದೆ.
ಮಗು ದೊಡ್ಡದಾದ ಮೇಲೆ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದೆಂದು ಹಲವರು ಕಮೆಂಟ್ ಮಾಡಿದ್ದಾರೆ. ಅಂತೂ ಇಂತೂ ಈ ವಿಡಿಯೋ ಬಹಳಷ್ಟು ನೆಟ್ಟಿಗರ ಮನಸ್ಸು ಗೆದ್ದಿದ್ದಂತೂ ನಿಜ.
