ಸರ್ಕಾರದಿಂದ ರಾಜ್ಯದ ಜನತೆಗೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳು ಬಯೋಮೆಟ್ರಿಕ್, ಆಧಾರ್, ಓಟಿಪಿ ವಿನಾಯಿತಿ ಸೌಲಭ್ಯ ಮತ್ತು ಪೋರ್ಟ್ ಎಬಿಲಿಟಿ ಸೇರಿ ಯಾವುದಾದರೊಂದು ವಿಧಾನದ ಮೂಲಕ ಪಡಿತರ ವಿತರಿಸಲು ಸರಕಾರ ಅನುವು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಸ್ತುಗಳನ್ನು ಭಾರತ ಆಹಾರ ನಿಗಮದಿಂದ ಸಗಟು ವಿತರಣಾ ಕೇಂದ್ರಗಳಿಗೆ ಹಾಗೂ ಸಗಟು ವಿತರಣಾ ಕೇಂದ್ರದಿಂದ ನ್ಯಾಯಬೆಲೆ ಅಂಗಡಿಯ ಬಾಗಿಲಿಗೆ, ಅಧಿಕೃತ ಸಾಗಾಣಿಕಾ ಗುತ್ತಿಗೆದಾರರ ಮೂಲಕ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿದೆ.
ನ್ಯಾಯಬೆಲೆ ಅಂಗಡಿಗಳು ಫಲಾನುಭವಿ ಕುಟುಂಬಗಳಿಗೆ ಪಡಿತರ ವಸ್ತುಗಳನ್ನು ತಲುಪಿಸುವ ಮುಖ್ಯವಾಹಿನಿಗಳಾಗಿದ್ದು, ನಿಗದಿತ ದರ ಹಾಗೂ ಪ್ರಮಾಣದಲ್ಲಿ ವಿತರಣೆಯ ಉಸ್ತುವಾರಿಗೆ ಸ್ಥಳೀಯ ಕಾರ್ಯಕಾರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ಹೆಚ್ಚಿನ ಪಾರದರ್ಶಕ ವಿತರಣೆಗಾಗಿ ನ್ಯಾಯಬೆಲೆ ಅಂಗಡಿವಾರು ಜಾಗೃತ ಸಮಿತಿಗಳನ್ನು ರಚಿಸಲಾಗಿದ್ದು, ಅವರಿಗೂ ಸಹ ನಿರ್ದಿಷ್ಟ ಅಧಿಕಾರವನ್ನು ನೀಡಲಾಗಿದೆ. ಇದರೊಂದಿಗೆ ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 10 ಕೆ. ಜಿ ಅಕ್ಕಿ, ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ ಒಟ್ಟಾರೆ 10ಕೆ.ಜಿ. ಅಕ್ಕಿ ಜೊತೆಗೆ ಬೇಳೆಗಳನ್ನು ಆಯಾ ಊರಿನ ಆಹಾರ ಪದ್ಧತಿಗೆ ಅನುಗುಣವಾಗಿ ನೀಡಲಾಗುತ್ತಿದೆ.
ಇದಲ್ಲದೆ, ಲಾಕ್‌ಡೌನ್ ಸಮಯದಲ್ಲಿ ಬಡವರು ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ಮೋದಿ ಸರ್ಕಾರ ಉಚಿತ ಅಕ್ಕಿಯ ಯೋಜನೆಯನ್ನು ಜಾರಿಗೆ ತಂದಿತ್ತು. ಹಾಗಾಗಿ, ಒಬ್ಬರಿಗೆ 5 ಕೆಜಿ ದರದಲ್ಲಿ ಉಚಿತ ಅಕ್ಕಿ ಲಭ್ಯವಾಗಿತ್ತು. ಅಂದರೆ ಒಂದು ಕಾರ್ಡಿನಲ್ಲಿ ನಾಲ್ಕು ಜನ ಇದ್ದರೆ, 20 ಕೆಜಿ ಉಚಿತ ಅಕ್ಕಿ ಸಿಗುತ್ತಿತ್ತು.
ಕರಾವಳಿಯ ಜನ ಹೆಚ್ಚಾಗಿ ಇಷ್ಟಪಡುವ ಜೊತೆಗೆ ನೆಚ್ಚಿಕೊಂಡಿರುವ ಕುಚಲಕ್ಕಿಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯ ಜನತೆಯ ಪಡಿತರ ವಿತರಣೆಯಲ್ಲಿ ನೀಡಬೇಕು ಎನ್ನುವ ಬೇಡಿಕೆ ಮುಂಚಿನಿಂದಲೂ ಕೇಳಿಕೊಂಡು ಬರುತ್ತಿತ್ತು.
ಸದ್ಯ ಈ ಬೇಡಿಕೆಗೆ ಸರಕಾರ ಅಸ್ತು ಹೇಳಿದ್ದು, ಬೇಡಿಕೆ ಈಡೇರಿಕೆಗೆ ಒಲವು ತೋರಿದೆ. ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿಯನ್ನು ಖರೀದಿಸಿ, ಪಡಿತರ ವ್ಯವಸ್ಥೆಯಡಿ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ವಿತರಿಸುವ ಸಾರ್ವಜನಿಕರ ಬೇಡಿಕೆಯ ಬಗ್ಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪೀಯುಷ್ ಗೋಯಲ್ ಅವರಿಗೆ ಪ್ರಸ್ತಾವನೆ ಕಳುಹಿಸಿ, ಇದಕ್ಕೆ ಸ್ಪಂದಿಸಿದ ಸಚಿವರು ಅನುಮತಿ ನೀಡಿದ್ದಾರೆ.
ಹಾಗಾಗಿ, ಸದ್ಯದಲ್ಲೇ ಸ್ಥಳೀಯ ಅಕ್ಕಿಯಾದ ಕುಚಲಕ್ಕಿ ಗ್ರಾಹಕರಿಗೆ ಲಭ್ಯವಾಗಲಿದ್ದು, ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಸ್ಥಳೀಯ ಪ್ರಬೇಧಗಳನ್ನು ಖರೀದಿಸಿ ಪಡಿತರ ವ್ಯವಸ್ಥೆಯಡಿ ವಿತರಿಸುವುದರಿಂದ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ.
ಕೇಂದ್ರ ಸರಕಾರವು ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್ ಗೆ 1940 ರೂ. ಹಾಗೂ ಗ್ರೇಡ್ ಎ ಭತ್ತಕ್ಕೆ ಕ್ವಿಂಟಾಲ್ ಗೆ 1960 ರೂ. ನಿಗದಿ ಮಾಡಿದ್ದು, ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ರೈತರು ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸರಕಾರ ಏನು ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ. ಸ್ಥಳಿಯ ಜನರ ಜೀವನ ಶೈಲಿಗೆ ಅನುಗುಣವಾಗಿ ಪಡಿತರ ವಿತರಣೆ ಮಾಡುವುದರಿಂದ ಅಲ್ಲಿನ ಸಾಂಪ್ರದಾಯಿಕ ಕೃಷಿಗೆ ಬೆಂಬಲ ದೊರೆತು ಕೃಷಿಕನಿಗೆ ನೆರವಾಗುತ್ತದೆ.
