Blood pressure: ದೇಹದ ಪ್ರತಿಯೊಂದುಗಳು ಸರಿಯಾಗಿ ಕೆಲಸ ಮಾಡಬೇಕು ಅಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ ಇತ್ಯಾದಿಗಳು ಸರಿಯಾಗಿರಬೇಕು. ಆಗ ಮಾತ್ರ ಆರೋಗ್ಯವು ಚೆನ್ನಾಗಿರುತ್ತದೆ.
ಇತ್ತೀಚೆಗೆ ಬಿಪಿ ಸಮಸ್ಯೆ ಇರುವವರು ಹೆಚ್ಚು, ದಿನೇ ದಿನೇ ಇಂಥವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೆ ಇದೆ, ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ರಕ್ತದೊತ್ತಡ 110-120/70-90 mmHg ಆಗಿರುತ್ತದೆ. ಇದಕ್ಕಿಂತ ಹೆಚ್ಚಿದ್ದರೆ ಇದನ್ನು ಅಧಿಕ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ ಊಟ, ವಾಕಿಂಗ್, ವ್ಯಾಯಾಮ ಅಥವಾ ನಿದ್ರೆ ಕಳೆದುಕೊಂಡ ನಂತರ ರಕ್ತದೊತ್ತಡ ಸ್ವಲ್ಪ ಹೆಚ್ಚಾಗುತ್ತದೆ. ಕೆಲ ಮಂದಿಯಲ್ಲಿ ಅಧಿಕ ರಕ್ತದೊತ್ತಡ ಆನುವಂಶಿಕವಾಗಿರುತ್ತದೆ. ಇನ್ನು ಕೆಲವು ಬಾರಿ ನಮ್ಮ ಜೀವನ ಶೈಲಿ ಆಹಾರ ಶೈಲಿಯಿಂದ ಕೂಡ ಇದು ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಗೋಧಿ, ಬೆಣ್ಣೆ, ತುಪ್ಪ, ಮಾಂಸ, ಮೊಟ್ಟೆಗಳಂತಹ ಪ್ರೋಟೀನ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ ಎಂಬುದು ವೈದ್ಯರ ಮಾತು.
ಅನೇಕ ಮಂದಿ ಹೆಚ್ಚಾಗಿ ಉಪ್ಪು ಮಿಶ್ರಿತ ಆಹಾರವನ್ನು ಸೇವಿಸುತ್ತಾರೆ. ಆದರೆ ಹೆಚ್ಚಾಗಿ ಉಪ್ಪು ತಿನ್ನುವುದು ದೇಹಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ದಿನಕ್ಕೆ ಕೇವಲ 5 ಗ್ರಾಂ ಉಪ್ಪು ತಿನ್ನುವುದು ಸೂಕ್ತವೆಂದು ಪರಿಗಣಿಸಲಾಗಿದೆ. ನೀವು ಅದಕ್ಕಿಂತ ಹೆಚ್ಚು ಉಪ್ಪು ತಿಂದರೆ ರಕ್ತವು ಹೆಚ್ಚು ಸ್ನಿಗ್ಧತೆಯನ್ನು ಪಡೆಯುತ್ತದೆ ಮತ್ತು ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
ಹಾಗೂ ಹೆಚ್ಚು ಮದ್ಯಪಾನ ಮಾಡುವವರಲ್ಲಿ ಅಧಿಕ ರಕ್ತದೊತ್ತಡ ಕಂಡು ಬರುತ್ತದೆ. ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದೊತ್ತಡದ ಸಮಸ್ಯೆಗಳು ಹೆಚ್ಚಾಗಿರುತ್ತದೆ. ಆದರೆ ಇದರ ಹೊರತಾಗಿ ಮಾನಸಿಕ ಒತ್ತಡ ಮತ್ತು ಆತಂಕ ಕೂಡ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ನಿರಂತರ ಮಾನಸಿಕ ಯಾತನೆ ಮತ್ತು ಮಾನಸಿಕ ಅಸ್ವಸ್ಥತೆಯಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ.
ಈ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವಿಶೇಷವಾಗಿ ನಲವತ್ತು ವರ್ಷದ ನಂತರ ಈ ಸಮಸ್ಯೆ ಸಾಮಾನ್ಯವಾಗಿದೆ. ಆದ್ದರಿಂದ ನಿಮ್ಮ ದೈನಂದಿನ ಅಭ್ಯಾಸಗಳು, ಆಹಾರ ಪದ್ಧತಿ, ಮಾನಸಿಕ ಆರೋಗ್ಯ ಮತ್ತು ನಿದ್ರೆಯ ಬಗ್ಗೆ ಸರಿಯಾದ ಕಾಳಜಿ ವಹಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದಾಗಿದೆ.
