Hair Beauty : ಒಬ್ಬ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಇಂದು ಅನೇಕರು ತಮ್ಮ ಕೂದಲಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಅಲ್ಲದೆ ಕೊಳೆ ಮತ್ತು ಧೂಳಿಯಿಂದ ರಕ್ಷಿಸಿಕೊಳ್ಳಲು ಹೆಚ್ಚಿನವರು ಪ್ರತಿದಿನವೂ ತಲೆ ಸ್ನಾನ ಮಾಡುವುದುಂಟು. ಹೀಗೆ ಪ್ರತಿದಿನ ತಲೆಗೆ ಸ್ನಾನ ಮಾಡುವುದು ಒಳಿತೇ? ಹಾಗಿದ್ದರೆ ವಾರಕ್ಕೆ ಎಷ್ಟು ಬಾರಿ ತಲೆ ಸ್ನಾನ ಮಾಡಬೇಕು? ಈ ಕುರಿತು ತಜ್ಞರು ಹೇಳುವುದೇನು?
ಪ್ರತೀ ದಿನ ಕೂದಲನ್ನು ತೊಳೆಯಲು ಬಳಸುವಂತ ಶಾಂಪೂ, ಸೋಪುಗಳಲ್ಲಿ ಸಾಕಷ್ಟು ರಾಸಾಯನಿಕ ಅಂಶಗಳಿದ್ದು, ಇವು ಕೂದಲಿನ ನೈಸರ್ಗಿಕ ಎಣ್ಣೆಯನ್ನು ತೆಗೆದು ಹಾಕುತ್ತವೆ. ಇದರಿಂದಾಗಿ ಕಾಲಾನಂತರದಲ್ಲಿ ಕೂದಲು ನಿರ್ಜೀವ ಮತ್ತು ದುರ್ಬಲವಾಗುವ ಸಾಧ್ಯತೆ ಇರುತ್ತವೆ, ಕೂದಲು ಉದುರುವ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ತಜ್ಞರ ಪ್ರಕಾರ ಪ್ರತಿದಿನ ತಲೆ ಸ್ನಾನ ಮಾಡುವುದು ಸೂಕ್ತವಲ್ಲ. ಹಾಗಿದ್ದರೆ ವಾರದಲ್ಲಿ ಎಷ್ಟು ಬಾರಿ ತಲೆ ಸ್ನಾನ ಮಾಡಬೇಕೆಂಬುದನ್ನು ನೋಡೋಣ.
ವಾರಕ್ಕೆ 2 ರಿಂದ ಮೂರು ಬಾರಿ ತಲೆ ಸ್ನಾನ ಮಾಡಿದರೆ ಸಾಕು ಎನ್ನುತ್ತಾರೆ ತಜ್ಞರು. ಇನ್ನೂ ಎಣ್ಣೆಯುಕ್ತ ಕೂದಲನ್ನು ಹೊಂದಿರುವವರು ವಾರದಲ್ಲಿ 3 ರಿಂದ 4 ಬಾರಿ ತಲೆಸ್ನಾನ ಮಾಡಬಹುದು. ಪ್ರತಿಯೊಬ್ಬರ ನೆತ್ತಿಯೂ ವಿಭಿನ್ನವಾಗಿರುತ್ತದೆ. ಕೆಲವರ ನೆತ್ತಿ ಎಣ್ಣೆಯುಕ್ತವಾಗಿದ್ದರೆ, ಇನ್ನು ಕೆಲವರ ನೆತ್ತಿ ಡ್ರೈಯಾಗಿರುತ್ತದೆ. ಎಣ್ಣೆಯುಕ್ತ ಕೂದಲಿದ್ದರೆ, ಕೂದಲು ಬೇಗನೆ ಜಿಡ್ಡಿನಂತಾಗುತ್ತದೆ ಹಾಗಾಗಿ ಎಣ್ಣೆಯುಕ್ತ ಕೂದಲನ್ನು ಹೊಂದಿರುವವರು ವಾರಕ್ಕೆ 3 ರಿಂದ 4 ಬಾರಿ ತಲೆ ಸ್ನಾನ ಮಾಡಬಹುದು ಎನ್ನುತ್ತಾರೆ ತಜ್ಞರು.
