ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೋರೋನಾ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ.
ಚೀನಾದ ಹೊರತಾಗಿ, ಕರೋನಾದ ಹೊಸ ರೂಪಾಂತರವು ಜಪಾನ್ ಮತ್ತು ಅಮೆರಿಕದಲ್ಲಿಯೂ ಕೂಡ ತನ್ನ ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದೆ.
ಚೀನಾದಲ್ಲಿ ಕೋವಿಡ್ -19 ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮಹಾಮಾರಿಯ ತಡೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಣಿಯಾಗಿದೆ. ಕೋವಿಡ್ ಪ್ರಕರಣ ಮತ್ತೆ ವೇಗವಾಗಿ ಹರಡುತ್ತಿರುವುದನ್ನು ಕಂಡು ವೈದ್ಯರು ಕೂಡ ಚಕಿತರಾಗಿದ್ದು, ಚೀನಾದ ಹೊರತಾಗಿ, ಕೊರೋನಾದ ಹೊಸ ರೂಪಾಂತರವು ಜಪಾನ್ ಮತ್ತು ಅಮೆರಿಕದಲ್ಲಿ ಕೂಡ ತನ್ನ ಅಟ್ಟಹಾಸ ಮೆರೆಯುತ್ತಿದೆ.
ಮುಂಬರುವ ದಿನಗಳಲ್ಲಿ ಚೀನಾದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಲಕ್ಷಣಗಳು ಕಂಡುಬರುತ್ತಿವೆ. ಪ್ರತಿದಿನ 10 ಲಕ್ಷ ಜನರು ಸೋಂಕಿಗೆ ಒಳಗಾಗುತ್ತಿದ್ದು, ಸಾವಿನ ಸಂಖ್ಯೆ 5 ಸಾವಿರ ತಲುಪಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ನೀಡಿದ ಅಪ್‌ಡೇಟ್ ಅನುಸಾರ, ದೇಶದಲ್ಲಿ 185 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳು 3,402 ಕ್ಕೆ ಇಳಿದಿವೆ ಎನ್ನಲಾಗಿದೆ
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ ಸಲಹೆ ನೀಡಿದೆ. ಸರ್ಕಾರ ಕೂಡ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದು, ವಿಮಾನಯಾನ ಸಚಿವಾಲಯದ ಪರವಾಗಿ, ಡಿಸೆಂಬರ್ 24 ರಿಂದ ಅಂತರರಾಷ್ಟ್ರೀಯ ವಿಮಾನಗಳಿಂದ ಬರುವ ಕೆಲವು ಪ್ರಯಾಣಿಕರಿಗೆ ಕೋರೋನ ವೈರಸ್ ಪರೀಕ್ಷೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ವಿಶ್ವದ ವಿವಿಧ ದೇಶಗಳಲ್ಲಿ ಕೋರೋನಾ ಪ್ರಕರಣಗಳು ವೇಗವಾಗಿ ಹರಡಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪ್ರತಿ ವಿಮಾನದಲ್ಲಿ ಒಟ್ಟು ಪ್ರಯಾಣಿಕರಲ್ಲಿ ಶೇಕಡಾ 2 ರಷ್ಟು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡಿಸುವಂತೆ ಅಧಿಕೃತ ಪತ್ರದಲ್ಲಿ ಸೂಚಿಸಲಾಗಿದೆ.
ಈ ಕುರಿತಾಗಿ, ನಾಗರಿಕ ವಿಮಾನಯಾನ ಸಚಿವಾಲಯದ ರಾಜೀವ್ ಬನ್ಸಾಲ್ ಅವರಿಗೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಪತ್ರ ಬರೆದಿದ್ದಾರೆ. ಪರೀಕ್ಷೆಯ ಬಳಿಕ, ಯಾರಾದರೂ ಕೋವಿಡ್ ಪಾಸಿಟಿವ್ ಎಂದು ಕಂಡು ಬಂದರೆ ಆ ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹೊರ ದೇಶಗಳಿಂದ ಬರುವ ಪ್ರತಿಯೊಂದು ವಿಮಾನ ಯಾತ್ರಿಕರ ಕೋವಿಡ್ ಟೆಸ್ಟ್ ಅನ್ನು ಆಯಾ ವಿಮಾನಯಾನ ಸಂಸ್ಥೆಗಳು ನೋಡಿಕೊಳ್ಳಲಿವೆ ಎನ್ನಲಾಗಿದೆ. ರಾಂಡಂ ಪರೀಕ್ಷೆಗೆ ಒಳಪಟ್ಟ ಬಳಿಕ, ಪ್ರಯಾಣಿಕರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ.
