Dr Ranganath: ಶಾಸಕರ ಬಳಿ ಕಷ್ಟ ಹೇಳಿಕೊಂಡು ಬಂದ ಬಡ ಮಹಿಳೆಯೊಬ್ಬರಿಗೆ ಸ್ವತಃ ಶಾಸಕರೇ ಶಸ್ತ್ರ ಚಿಕಿತ್ಸೆ ಮಾಡಿದ ಅಚ್ಚರಿಯ ಘಟನೆ ನಡೆದಿದೆ.
ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಯೊಬ್ಬರು ತೀವ್ರ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ ಕಷ್ಟವನ್ನು ಅಲ್ಲಿನ ಶಾಸಕರ (Dr Ranganath) ಬಳಿ ಹೇಳಿ ಒಂದಿಷ್ಟು ಸಹಾಯ ಪಡೆಯಲು ಆ ಮಹಿಳೆ ಬಂದಿದ್ದರು. ಆದರೆ ಶಾಸಕರೇ ಖುದ್ದಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
10 ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯಡಿ ಕೀಲು ಆಪರೇಷನ್ ಮಾಡಿಸಿಕೊಂಡಿದ್ದರು ಮಹಿಳೆ. ಆದರೆ ಆಕೆಗೆ ಮತ್ತೆ ಸಮಸ್ಯೆಯಾಗಿತ್ತು. ಆದ್ರೆ ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ 2 ಬಾರಿ ಸರ್ಜರಿಗೆ ಅವಕಾಶ ಇಲ್ಲದ ಕಾರಣದಿಂದ ರೋಗಿಗಳೇ ಹಣ ತೆತ್ತು ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಆ ಶಸ್ತ್ರಚಿಕಿತ್ಸೆ ನೆರವೇರಿಸಲು 4-5 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಈಗ ಶಾಸಕರೇ ಉಚಿತ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಕುಣಿಗಲ್ ನ ಶಾಸಕರೂ ಆಗಿರುವ ವೈದ್ಯ ಡಾ.ರಂಗನಾಥ್ (Dr. Ranganath) ಅವರೇ ಸ್ವತಃ ಆಪರೇಶನ್ ಮಾಡಿ ತಮ್ಮ ಕ್ಷೇತ್ರದ ಮಹಿಳೆಯ ಸಮಸ್ಯೆ ಬಗೆಹರಿಸಿದ್ದಾರೆ.
ಅಲ್ಲದೇ, ಕೀಳು ತಜ್ಞರಾಗಿರುವ ಡಾ.ರಂಗನಾಥ್ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿರುವ ಒಟ್ಟು 23 ಮಹಿಳೆಯರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕರು ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಶಾಸಕರ ಈ ಜನ- ವೈದ್ಯ ಸೇವೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
