ಆತನಿಗೆ ತಾನು ಹೆಣ್ಣಾಗಬೇಕೆಂಬ ಮಹದಾಸೆ ಇತ್ತು. ನಾನು ಹೆಣ್ಣಾದರೆ ಚೆನ್ನಾಗಿರುತ್ತದೆ ಎಂದು ಕನಸು ಕಂಡ ಯುವಕ ಆತ. ಹಾಗಾಗಿ ತನ್ನ ‘ ಅದನ್ನೇ’ ಬದಲಾಯಿಸಲು ನಿರ್ಧಾರ ಮಾಡಿಯೇ ಬಿಟ್ಟ. ಅದೇ ಸಮಯಕ್ಕೆ ಈತನಿಗೆ ಪರಿಚಯ ಆದವರೇ ಮೆಡಿಕಲ್ ವಿದ್ಯಾರ್ಥಿಗಳು. ಅವರ ಮುಂದೆ ಆತ ತನ್ನ ಮನದಾಸೆ ಹೇಳಿಕೊಂಡ. ಆ ಕಲಿಯುವ ವಿದ್ಯಾರ್ಥಿಗಳು ತಾವು ವೈದ್ಯರೇ ಆದೆವು ಎನ್ನುವಂತೆ ನಾವೇ ಆಪರೇಷನ್ ಮಾಡಿ ನಿನ್ನನ್ನು ಹೆಣ್ಣಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದೀಗ ಆತ ಪ್ರಾಣಬಿಟ್ಟಿದ್ದರೆ, ಈ ಯುವ ವೈದ್ಯಕೀಯ ವಿದ್ಯಾರ್ಥಿಗಳು ಕಂಬಿ ಹಿಂದೆ ಇದ್ದಾರೆ.
ಆತನ ಹೆಸರು ಶ್ರೀಕಾಂತ್. 28 ವರ್ಷದ ಶ್ರೀಕಾಂತ್ ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯವನು. ಸಣ್ಣಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ವ್ಯಕ್ತಿ. ಈತನಿಗೆ ಮದುವೆಯಾಗಿದ್ದು, ಇತ್ತೀಚೆಗಷ್ಟೇ ಆತನಿಗೆ ಮದುವೆಯಾಗಿ, ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಹೀಗಾಗಿ ಆತನಿಗೆ ಜೀವನದಲ್ಲಿ ಜಿಗುಪ್ಸೆ ಬಂದಿತ್ತು. ಜೀವನವೇ ಬೇಡ ಅನಿಸಿದೆ. ನಂತರ ಗಂಡಾಗಿದ್ದು ಸಾಕು, ಇನ್ನು ಮುಂದೆ ಹೆಣ್ಣಿನ ತರಹ ಜೀವನ ನಡೆಸಬೇಕು ಎಂದು ಎನಿಸಿದೆ. ಹಾಗಾಗಿ ಲಿಂಗಪರಿವರ್ತನೆಗೆ ಮುಂದಾಗಿದ್ದಾನೆ.
ನಂತರ ಆತನಿಗೆ ಪರಿಚಯ ಆಗಿದ್ದೇ, ಮಸ್ತಾನ್ ಮತ್ತು ಜೀವ ಎಂಬ ಬಿ ಫಾರ್ಮಾ ವಿದ್ಯಾರ್ಥಿಗಳ ಪರಿಚಯ. ಅವರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾನೆ. ಅವರು ಮುಂಬೈ ಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಅಲ್ಲಿ ಲಿಂಗ ಪರಿವರ್ತನೆ ಆಪರೇಷನ್ ಗೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಂತ ಹೇಳಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಅನುಕೂಲವಿಲ್ಲದ ಶ್ರೀಕಾಂತ್ ಬೇರೆ ಉಪಾಯ ಇದೆಯಾ ಅಂತ ವಿದ್ಯಾರ್ಥಿಗಳನ್ನು ಕೇಳಿದ್ದಾನೆ.
ಆಗ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ನಾವೇ ಆಪರೇಷನ್ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಶ್ರೀಕಾಂತ್ ಒಪ್ಪಿದ್ದಾನೆ. ಮೂವರೂ ಒಂದು ಲಾಡ್ಜ್ ಬುಕ್ ಮಾಡಿ ಅಲ್ಲೇ ಉಳಿದುಕೊಂಡಿದ್ದಾರೆ.
ಈ ಬಿ ಫಾರ್ಮಾ ವಿದ್ಯಾರ್ಥಿಗಳು ಯೂಟ್ಯೂಬ್ ನೋಡಿಕೊಂಡು ಅಪರೇಷನ್ ಮಾಡಲು ರೆಡಿಯಾಗಿದ್ದಾರೆ. ಆತನಿಗೆ ಅರವಳಿಕೆ ಔಷಧ ನೀಡಿ ಅಪರೇಷನ್ ಶುರು ಮಾಡಿದ್ದಾರೆ. ವಿದ್ಯಾರ್ಥಿಗಳು ಅಪರೇಷನ್ ಮಾಡುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅಪರೇಷನ್ ಮಾಡಿದ್ದಾರೆ. ಹೀಗಾಗಿ ಶ್ರೀಕಾಂತ್ ಗೆ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾನೆ.
ಲಾಡ್ಜ್ ಸಿಬ್ಬಂದಿ ಕೋಣೆಯೊಳಗೆ ಬಂದು ನೋಡಿದಾಗ ಈ ಘಟನೆ ನಡೆದಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
