ಪ್ರೇಮಿಗಳಿಗೆ ಎಷ್ಟು ಮಾತನಾಡಿದರೂ ಆ ಮಾತು ಮುಗಿಯೋದೇ ಇಲ್ಲಾ. ಮಾತನಾಡಲು ಏನೂ ಇಲ್ಲಾ ಅಂದ್ರು ಟೈಮ್ ಪಾಸ್ ಗಾದ್ರೂ ಭೇಟಿಯಾಗುತ್ತಾರೆ. ಹಾಗೇ ಇಲ್ಲೊಬ್ಬ ಯುವಕ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಆಕೆಯ ಮನೆಗೆ ಅದು ಕೂಡ ಮಧ್ಯರಾತ್ರಿ ಬಂದಿದ್ದಾನೆ. ಈ ವೇಳೆ ಯುವತಿಯ ಮನೆಯವರಿಗೆ ಎಚ್ಚರವಾಗಿದೆ, ಇನ್ನೇನು ಸಿಕ್ಕಿಬೀಳುತ್ತೇನೆಂದು ಯುವಕ ತಪ್ಪಿಸಿಕೊಳ್ಳಲು ಓಡಿ ಹೋಗಿ ಬಾವಿಗೆ ಬಿದ್ದ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರೂ ಪ್ರೇಮಿಗಳು ಒಂದೇ ಗ್ರಾಮದವರಾಗಿದ್ದರು. ಯುವಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿಯಾಗಲು ಆಕೆಯ ಮನೆಗೆ ಮಧ್ಯರಾತ್ರಿ ಸುಮಾರು ಎರಡು ಗಂಟೆಯ ಹೊತ್ತಿಗೆ ಎಂಟ್ರಿ ಕೊಟ್ಟಿದ್ದಾನೆ. ನಂತರ ಪ್ರೇಯಸಿಯನ್ನು ಭೇಟಿಯಾಗಿ, ಏಕಾಂತದಲ್ಲಿ ಇವರಿಬ್ಬರ ಪ್ರೇಮ ಸಂಭಾಷಣೆ ಆಗುತ್ತಿತ್ತು. ಈ ವೇಳೆ ಆಕೆಯ ಮನೆಯವರಿಗೆ ಮಾತಿನ ಶಬ್ಧ ಕೇಳಿಸಿತೋ ಏನೋ ಅವರ ನಿದ್ದೆ ಹಾರಿ ಹೋಗಿ ಎಚ್ಚರಗೊಂಡರು.
ಮನೆಯವರು ಎಚ್ಚರಗೊಂಡರು ಎಂದು ತಿಳಿದಿದ್ದೇ ತಡ ಯುವಕ ಗಾಬರಿಗೊಂಡಿದ್ದಾನೆ. ತಕ್ಷಣವೇ ತಪ್ಪಿಸಿಕೊಳ್ಳಲು ಅಲ್ಲಿಂದ ಓಡಿದ್ದಾನೆ. ರಾತ್ರಿಯ ವೇಳೆ ಸಿಕ್ಕ ಕಡೆ ಓಡಿ ತಿಳಿಯದೆ ತೆರೆದ ಬಾವಿಗೆ ಹೋಗಿ ಬಿದ್ದಿದ್ದಾನೆ. ಇನ್ನೂ ಈ ಗದ್ದಲದಿಂದ ಅಕ್ಕಪಕ್ಕದ ಮನೆಯವರು ಸಹ ಎಚ್ಚೆತ್ತಿದ್ದು, ಬಾವಿಯ ಸುತ್ತಲೂ ಸ್ಥಳೀಯರು ಜಮಾಯಿಸಿದ್ದಾರೆ. ಕೊನೆಗೆ ಹೇಗೋ ಕಷ್ಟಪಟ್ಟು ಆತನನ್ನು ಬಾವಿಯಿಂದ ಮೇಲಕ್ಕೆ ಎತ್ತಲಾಗಿದೆ.
ಇನ್ನೂ ಇದರ ಮಧ್ಯೆ ಯುವತಿಯ ಕುಟುಂಬಸ್ಥರು ಯುವಕನ ಮೇಲೆ ಪಂಚಾಯಿತಿಯವರಿಗೆ ದೂರು ನೀಡಿದ್ದಾರೆ. ಆದರೆ ಪಂಚಾಯಿತಿಯಲ್ಲಿ ಈ ಪ್ರಕರಣ ಸುಖಾಂತ್ಯವಾಗಿದೆ. ಇವರಿಬ್ಬರ ಪ್ರೇಮವನ್ನರಿತ ಹಿರಿಯರೆಲ್ಲರೂ ಸೇರಿ ದೇವಸ್ಥಾನದಲ್ಲಿ ಇವರಿಬ್ಬರ ವಿವಾಹವನ್ನು ನೆರವೇರಿಸಿದ್ದಾರೆ. ಅಂತು ಒದೆ ಬೀಳುತ್ತದೆ ಎಂದು ಓಡಿದವನಿಗೆ ಆಶ್ಚರ್ಯದ ಜೊತೆಗೆ ಈಗಾಗಲೇ ಖುಷಿಯು ಆಗಿರುತ್ತದೆ. ಅನಿರೀಕ್ಷಿತ ಮದುವೆಗೆ ಅಳಿಸಿ ಹೋಗದಂತಹ ನೆನಪಿನ ಘಟನೆಯಾಯಿತು ಎಂದೇ ಹೇಳಬಹುದು.
