
ಉತ್ತರ ಪ್ರದೇಶ: ಹೆಣ್ಣು ಮಗು ಹುಟ್ಟಿದರೆ ಬೇಸರ ಪಡುವ ಜನರ ನಡುವೆ ಉತ್ತರ ಪ್ರದೇಶದಲ್ಲಿ ಕುಟುಂಬವೊಂದು ಹೆಣ್ಣು ಮಗುವಿನ ಆಗಮನವನ್ನು ಸಂಭ್ರಮಿಸಿದೆ. ಸುಮಾರು 40 ವರ್ಷಗಳ ನಂತರ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವನ್ನು ವಿಶೇಷವಾಗಿ ಸ್ವಾಗತಿಸಿದೆ. ಡಿಜೆ ಮತ್ತು ಕಾರುಗಳ ಮೆರವಣಿಗೆ ಮೂಲಕ ಮಗುವನ್ನು ಮನೆಗೆ ಕರೆತರಲಾಗಿದೆ. ನೂತನ ಮಗುವಿನ ಆಗಮನ ಸಂಭ್ರಮದಲ್ಲಿ ನೆರೆಹೊರೆಯವರು ಮತ್ತು ದಾರಿಹೋಕರು ಭಾಗಿಯಾದರು.

ಆಸ್ಪತ್ರೆಯಿಂದ ಮಗುವನ್ನು ಮನೆಗೆ ಕರೆ ತರುವಾಗ 13 ಸ್ಕಾರ್ಪಿಯೊ, ಎಸ್‌ಯುವಿ ಕಾರುಗಳ ಮೂಲಕ ಮೆರವಣಿಗೆ ಮಾಡಲಾಯಿತು. “ಮಗಳ ಆಗಮನದಿಂದ ನಮ್ಮ ಕನಸು ನನಸಾದಂತಾಗಿದೆ. ಇದು ನಮ್ಮ ಜೀವನದ ಅತ್ಯಂತ ದೊಡ್ಡ ಸಂತೋಷದ ಸಮಯ” ಎಂದು ನವಜಾತ ಶಿಶುವಿನ ಪೋಷಕರು ಹೇಳಿಕೊಂಡಿದ್ದಾರೆ.
ಮಗುವನ್ನು ಮನೆಗೆ ಕರೆ ತರುತ್ತಿರುವ ಸಂಭ್ರಮದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಜುಮ್ ಪರ್ವೇಜ್ ಹಾಗೂ ನಿಖತ್ ಫಾತಿಮಾ ದಂಪತಿಗೆ ಹೆಣ್ಣು ಮಗು ಜನಿಸಿದೆ. ಅಂಜುಮ್ ಅವರು ಒಟ್ಟು ನಾಲ್ವರು ಸಹೋದರರು. ಅವರಿಗೆ ಸಹೋದರಿಯರು ಇರಲಿಲ್ಲ. ಕುಟುಂಬ 40 ವರ್ಷದಿಂದ ಹೆಣ್ಣು ಮಗಳ ನಿರೀಕ್ಷೆಯಲ್ಲಿತ್ತು . ”ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಆಚರಣೆಯನ್ನು ಕಂಡಿರುವೆ. ಇದು ಕುಟುಂಬಕ್ಕೆ ಮಾತ್ರವಲ್ಲ, ಇಡೀ ಬುಂದೇಲ್‌ಖಂಡ್ ಪ್ರದೇಶದ ಹೆಣ್ಣು ಮಕ್ಕಳಿಗೆ ಗೌರವ ಮತ್ತು ಪ್ರಾಮುಖ್ಯತೆಯನ್ನು ನೀಡುವ ಸಂದೇಶ ರವಾನಿಸುತ್ತದೆ,” ಎಂದು ಮಗು ಜನಿಸಿದ ಆಸ್ಪತ್ರೆ ವೈದ್ಯೆ ಡಾ. ಅಂಶು ಮಿಶ್ರಾ ಹೇಳಿದ್ದಾರೆ.
