Amazon forest : ಹೆಚ್ಚಿನ ಚಿತ್ರಗಳು ಹಲವರ ಜೀವನಾಧಾರಿತ ಕಥೆಗಳನ್ನೋ ಅಥವಾ ನೈಜ ಘಟನೆಗಳ ಕುರಿತೋ ಮೂಡಿ ಬಂದಿವೆ. ಕೆಲವೊಮ್ಮೆ ಈ ಘಟನೆಗಳು ಅತ್ಯಂತ ಭಯಾನಕವಾಗಿರುತ್ತವೆ. ಅಂದಹಾಗೆ ಹಾಲಿವುಡ್(Hollywood) ಚಿತ್ರವಾದ ‘Cast Away’ ಕೂಡ ಇಂತದ್ದೇ ಸಿನಿಮಾವಾಗಿದೆ. ಮೈ ಜುಮ್ಮೆನ್ನಿಸುವ, ಮನಸ್ಸು ಕದಡುವ ಈ ಚಿತ್ರವನ್ನು ಹೆಚ್ಚಿನವರು ನೋಡಿರುತ್ತೀರಿ. ವಿಮಾನ ಪತನದಿಂದಾಗಿ, ಸಮುದ್ರದ ನಡುವಿನ ದ್ವೀಪವೊಂದರಲ್ಲಿ ಸಿಲುಕಿಕೊಳ್ಳುವ ವ್ಯಕ್ತಿ, ಏಕಾಂಗಿಯಾಗಿ, ಪ್ರಕೃತಿ ತಂದೊಡ್ಡುವ ಎಲ್ಲಾ ಸವಾಲುಗಳನ್ನು ಎದುರಿಸಿ ಮತ್ತೆ ತನ್ನ ಜಗತ್ತಿಗೆ ಮರಳುತ್ತಾನೆ. ಈ ಘಟನೆ ನಡೆದ ಬಳಿಕ ಅದು ಚಿತ್ರವಾಗಿದೆ. ಆದರೆ ಇದು ಚಿತ್ರವಾದ ಬಳಿಕ ಇಂತದ್ದೇ ಮತ್ತೊಂದು ಘಟನೆ ನಡೆದಿದ್ದು, ವ್ಯಕ್ತಿಯೋರ್ವ ಇದೇ ರೀತಿ ಸಾಹಸಮಯ ದಿನಗಳನ್ನು ಕಳೆದಿರುವ ಭಯಾನಕ ಘಟನೆ ಈಗ ಬೆಳಕಿಗೆ ಬಂದಿದೆ.
ಹೌದು, ಅಮೆಜಾನ್ ಕಾಡಿ(Amazon Forest)ನಲ್ಲಿ ಬೊಲಿವಿಯನ್(Boliviyan) ವ್ಯಕ್ತಿಯೋರ್ವ ಬರೋಬ್ಬರಿ 31 ದಿನಗಳನ್ನು ಕಳೆದಿದ್ದಾನೆ. ಈ ಅವಧಿಯಲ್ಲಿ ಕೀಟಗಳನ್ನು ತಿಂದು ಮತ್ತು ತನ್ನದೇ ಮೂತ್ರವನ್ನು ಸೇವಿಸಿ ಆತ ಬದುಕುಳಿದಿದ್ದಾನೆ!. ಕಳೆದ ಜನವರಿ 25ರಂದು ಉತ್ತರ ಬೊಲಿವಿಯಾದಲ್ಲಿ ಬೇಟೆಯಾಡಲೆಂದು ಅಮೆಜಾನ ಕಾಡಿಗೆ ಹೋದ 30 ವರ್ಷ ವಯಸ್ಸಿನ ಜೊನಾಟನ್ ಅಕೋಸ್ಟಾ(Jonatan Akosta) ಬೇಟೆಯಾಡುತ್ತಾ ಕಾಡಿನ ಒಳಗೆ ಹೋಗಿ ತನ್ನ ಸ್ನೇಹಿತರಿಂದ ಬೇರ್ಪಟ್ಟಿದ್ದಾನೆ. ಸುಮಾರು ಒಂದು ತಿಂಗಳುಗಳವರೆಗೆ ಜೊನಾಟನ್ ಅಕೋಸ್ಟಾ ಅಮೆಜಾನ್ ಕಾಡಿನಲ್ಲಿ ಏಕಾಂಗಿಯಾಗಿ ಬದುಕುಳಿದಿದ್ದಾನೆ ಎಂದು ಬಿಬಿಸಿ(BBC) ವರದಿ ಹೇಳಿದೆ.
ಈ ಸಮಯದಲ್ಲಿ ಜೊನಾಟನ್ ತನ್ನ ಜೀವ ಉಳಿಸಿಕೊಳ್ಳಲು ನಡೆಸಿದ ಹೋರಾಟಗಳ ಬಗ್ಗೆ ಕೇಳಿದ್ರೆ ನೀವೆ ಮರುಕ ಪಡುತ್ತೀರಿ. ಆತ ಹಸಿವನ್ನು ನೀಗಿಸಲು ಅಲ್ಲಿದ್ದಂತಹ ಕೀಟಗಳು ಮತ್ತು ವಿವಿಧ ಪ್ರಕಾರದ ಹುಳುಗಳನ್ನು ಹಾಗೂ ಕಾಡು ಹಣ್ಣುಗಳನ್ನು ತಿನ್ನುತ್ತಿದ್ದನಂತೆ! ಕುಡಿಯಲು ನೀರು ಸಿಗದಿದ್ದಾಗ ತನ್ನದೇ ಮೂತ್ರವನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತಿದ್ದ. ಮಳೆ ಬಂದಾಗ ತನ್ನ ರಬ್ಬರ್ ಬೂಟುಗಳಲ್ಲಿ, ನೀರನ್ನು ಸಂಗ್ರಹಿಸಿ ನಂತರ ಅದನ್ನು ಕುಡಿಯಲು ಉಪಯೋಗಿಸುತ್ತಿದ್ದ. ಆದರೆ ಮಳೆ ಬಾರದಿದ್ದಾಗ ತನ್ನದೇ ಮೂತ್ರ ಕುಡಿದು ಬದುಕಿದ್ದಾನೆ! ಅಲ್ಲದೆ ‘ನಾನು ಕಾಡಿನಲ್ಲಿದ್ದಷೂ ದಿನವೂ ನಿತ್ಯ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ’ ಎಂದು ಜೊನಾಟನ್ ಹೇಳಿಕೊಂಡಿದ್ದಾನೆ.
ಭಯನಾಕವಾದ ಕಾಡು ಮೃಗಗಳಿಂದ ಕೂಡಿದ ಆ ಅರಣ್ಯದಲ್ಲಿ, ಜಾಗ್ವಾರ್(Jaguar)ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನೂ ಎದುರಿಸಿರುವ ಜೊನಾಟನ್, ತನ್ನ ಜೀವ ಕೈಯಲ್ಲಿ ಹಿಡಿದುಕೊಂಡೇ ಒಂದು ತಿಂಗಳುಗಳ ಕಾಲ ಅಮೆಜಾನ್ ಕಾಡಿನಲ್ಲಿ ಸಂಚರಿಸಿದ್ದಾನೆ. ಕೊನೆಯದಾಗಿ ರಕ್ಷಣಾ ತಂಡವೊಂದು ಜೊನಾಟನ್ ಅಕೋಸ್ಟಾನನ್ನು ಗುರುತಿಸಿದ್ದು, ಆತನನ್ನು ಪತ್ತೆಹಚ್ಚಿ ಕೂಡಲೇ ಆಸ್ಪತ್ರೆಗೆ(Hospital) ದಾಖಲಿಸಿದೆ. 31 ದಿನಗಳ ಅವಧಿಯಲ್ಲಿ ಬರೋಬ್ಬರಿ 17 ಕೆ.ಜಿ ತೂಕವನ್ನು ಕಳೆದುಕೊಂಡಿದ್ದು, ಅವರ ಪಾದಗಳೂ ಕೂಡ ಊದಿಕೊಂಡಿವೆ. ಸದ್ಯ ಜೊನಾಟನ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಲ್ಲದೆ ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಜೊನಾಟನ್, ಕೊಂಚ ಮಟ್ಟಿಗೆ ಚೇತರಿಸಿಕೊಂಡು, ತಾನು ಇನ್ನು ಮುಂದೆ ಬೇಟೆಯಾಡುವುದನ್ನು ತ್ಯಜಿಸುವುದಾಗಿ ಶಪಥ ಮಾಡಿದ್ದಾನೆ. ಜೊತೆಗೆ ಸಂಗೀತ ಸೇವೆಗಾಗಿ ತನ್ನ ಜೀವನವನ್ನು ಮುಡುಪಾಗಿಡುವ ಪ್ರತಿಜ್ಞೆಯನ್ನೂ ಮಾಡಿದ್ದಾನಂತೆ! ಬಹುಶಃ ದೇವರು ನನ್ನನ್ನು ಈ ಮೂಲಕ ಅಗ್ನಿಪರೀಕ್ಷೆಗೆ ದೂಡಿದ್ದು, ಆತನ ಇಚ್ಛೆಯಂತೆ ನಾನು ಬದುಕಿ ಬಂದಿದ್ದೇನೆ. ಇನ್ನು ನಾನು ಎಂದಿಗೂ ಬೇಟೆಯಾಡುವುದಿಲ್ಲ. ನನ್ನ ಉಳಿದ ಜೀವನವನ್ನು ದೇವರಿಗಾಗಿ, ಸಂಗೀತ(Music) ಸೇವೆ ಸಲ್ಲಿಸುವ ಮೂಲಕ ಕಳೆಯುತ್ತೇನೆ ಎಂದು ಆತ ಹೇಳಿದ್ದಾನೆ.
ಜೊನಾಟನ್ ಅಕೋಸ್ಟಾ ಕಿರಿಯ ಸಹೋದರ ಹೊರಾಸಿಯೋ ಅಕೋಸ್ಟಾ(Horasiyo Akosta) ಅವರು ಮಾತನಾಡಿ ‘ನನ್ನ ಅಣ್ಣ ಇನ್ನು ಮುಂದೆ ದೇವರನ್ನು ಸ್ತುತಿಸಲು ಸಂಗೀತವನ್ನು ನುಡಿಸಲಿದ್ದಾರೆ. ಅವರು ದೇವರಿಗೆ ಈ ಭರವಸೆ ನೀಡಿದ್ದು, ತಮ್ಮ ಭರವಸೆಯನ್ನು ಉಳಿಸಿಕೊಳ್ಳುತ್ತಾರೆ, ದೇವರು ಆದಷ್ಟೂ ಬೇಗ ಅವರನ್ನು ಗುಣಮುಖರನ್ನಾಗಿ ಮಾಡಲಿ ಎಂದು ನಾನು ಪ್ರಾರ್ಥಿಸಿದ್ದಾನೆ.
