ವೈದ್ಯಕೀಯ ಚಮತ್ಕಾರ ಹಾಗೂ ಸಂಶೋಧನೆ ದಿನಕ್ಕೊಂದು ಬದಲಾವಣೆ ತರುತ್ತಿದೆ. ಈ ವರೆಗೆ ಮಹಿಳೆಯರಿಗೆ ಮಾತ್ರವೇ ಗರ್ಭ ನಿರೋಧಕ ಮಾತ್ರೆಗಳು ದೊರೆಯುತ್ತಿದ್ದವು. ಜೋಡಿಗಳು ಸೆಕ್ಸ್ ಆಚರಿಸುವ ಮೊದಲು ಅಥವಾ ಇಂತಿಷ್ಟು ಗಂಟೆಗಳ ಒಳಗೆ ಮಹಿಳೆಯರು ಆ ಮಾತ್ರೆಯನ್ನು ಸೇವಿಸಿದರೆ ಗರ್ಭವತಿ ಆಗುವ ಅಪಾಯ ತಪ್ಪುತ್ತಿತ್ತು. ಇನ್ನು ಗರ್ಭನಿರೋಧಕ ಮಾತ್ರೆಯ ಜಂಜಡ ಮಹಿಳೆಗೆ ಬೇಕಿಲ್ಲ, ಮುಂದೆ ಗಂಡಸರಿಗೂ ಬರ್ತಿದೆ ಗರ್ಭ ನಿರೋಧಕ ಮಾತ್ರೆ (Men Contraceptive Pill)!
ಹಲವಾರು ವರ್ಷಗಳ ಹಿಂದೆ ಮಹಿಳೆಯರಿಗಾಗಿ ತಯಾರಾಗಿದ್ದ ಗರ್ಭ ನಿರೋಧಕ ಮಾತ್ರೆ ಪುರುಷರಿಗೂ ಉಪಯೋಗಿಸುವ ಬಗ್ಗೆ ತಜ್ಞರ ತಂಡವೊಂದು ಸಂಶೋಧನೆ ನಡೆಸಿದ್ದು, ಪ್ರಯೋಗಾಲಯದಲ್ಲಿ ಇದರ ಪರಿಣಾಮ ಹಾಗೂ ದುಷ್ಪರಿಣಾಮದ ಬಗ್ಗೆ ಇನ್ನೂ ಹೆಚ್ಚಿನ ಪ್ರಯೋಗ ನಡೆಯುತ್ತಿದೆ. ಗಂಡಸರು ಸಂಭೋಗದ ಸಮಯದಲ್ಲಿ ಕಾಂಡೋಮ್ಸ್ ( ಜನಪ್ರಿಯ ನಿರೋಧ್ ) ಬಳಸಿ ಗರ್ಭಧಾರಣೆಯಾಗುವುದನ್ನು ತಪ್ಪಿಸುತ್ತಿದ್ದು, ಹಲವಾರು ಕಡೆಗಳಲ್ಲಿ ಗುಣಮಟ್ಟದ Condoms ಬಳಸದೆ ಸಮಸ್ಯೆಗೆ ಸಿಲುಕಿದವರೂ ಇದ್ದಾರೆ. Condoms ಏಡ್ಸ್ ಮುಂತಾದ ರೋಗಗಳು ಹರಡದಂತೆ ಬಳಸುವ ಸಾಧನವಾಗಿದ್ದು, ಗರ್ಭ ಧರಿಸುವುದನ್ನೂ ತಪ್ಪಿಸುವಲ್ಲಿ ಪ್ತ್ರಮುಖ ಪಾತ್ರ ವಹಿಸುತ್ತಿತ್ತು. ಆದರೆ, 2 ಪ್ರತಿಶತ ಕಾಂಡೋಮ್ ಗಳು ಹರಿದು ಹೋಗುವ ಸಂಭವ ಇದೆ. ಅಂದರೆ 98 ಭಾಗ ಕಾಂಡೋಮ್ ಗಳು ಸೇಫ್ . ಅದೇ ಸರಿಯಾಗಿ ಬಳಸಲು ಬರದವರು ಕಾಂಡೋಮ್ ಉಪಯೋಗಿಸಿದರೆ, 85 ಪ್ರತಿಶತ ಮಾತ್ರ ಸೇಫ್ಟಿ.
ಸದ್ಯ ಇನ್ನು ಮುಂದಕ್ಕೆ ಇದ್ಯಾವುದರ ಚಿಂತೆ ಇಲ್ಲದಂತೆ ಮಾಡಲು ಗಂಡಸರ ಮೇಲೆ ಮಾತ್ರೆಗಳ ಪ್ರಯೋಗ ನಡೆಸಲು ಉದ್ದೇಶಿಸಲಾಗಿದೆ. ಮೊದಲಿಗೆ ಪ್ರಯೋಗಾಲಯದಲ್ಲಿ ಗಂಡು ಇಲಿಗಳ ಮೇಲೆ ಪ್ರಯೋಗ ನಡೆಸಿ ಯಶಸ್ವಿಯಾದ ತಜ್ಞರ ತಂಡವು ಎರಡು ಗಂಟೆಗಳ ಕಾಲ ವೀರ್ಯಾಣುವನ್ನು ನಿಷ್ಕ್ರಿಯಗೊಳಿಸುವ ಶಕ್ತಿಯ ಬಗ್ಗೆ ಕಂಡುಕೊಂಡಿದ್ದಾರೆ. ಅಂದರೆ, ಆ ಮಾತ್ರೆ ತೆಗೆದುಕೊಂಡ ತಕ್ಷಣ ವೀರ್ಯಾಣುಗಳು ತಮ್ಮ ಚಲನಶೀಲತೆಯನ್ನು ಕಳೆದುಕೊಳ್ಳುತ್ತವೆ.
ಸಾಮಾನ್ಯವಾಗಿ ವೀರ್ಯಾಣುಗಳು ಗಂಡು ಜೀವಿಯ ವೃಷಣದಿಂದ ಹೊರಕ್ಕೆ ಚೆಲ್ಲಿ, ಸ್ತ್ರೀಯ ದೇಹದ ಒಳ ಹೊಕ್ಕನಂತರ ಒಳ್ಳೆಯ ಈಜುಗಾರನ ಥರ ಸ್ಪರ್ಧೆಯಲ್ಲಿ ಈಜು ಹೊಡೆಯುತ್ತವೆ. ಪ್ರತಿ ವೀರ್ಯಾಣುವಿಗೂ ಅವಳನ್ನು ಕಾಣುವ, ತಡಕುವ ಕಾತುರ. ಅದಕ್ಕಾಗಿ ಇರೋ ಬರೋ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಮುಂದಕ್ಕೆ ಈಜು ಹಾಕುತ್ತವೆ. ಅಲ್ಲಿ, ಹೆಣ್ಣಿನ ಗರ್ಭಾಶಯದ ಬಾಗಿಲಲ್ಲಿ, ಶೃಂಗಾರ ಮಾಡಿಕೊಂಡು ಕೊಬ್ಬಿನಿಂದ ಕುಳಿತ ಅಂಡಾಣುವನ್ನು ಸೇರಲು ಈಜು ಹಾಕುತ್ತದೆ ವೀರ್ಯಾಣು. ಅಂತಹ ವೀರ್ಯಾಣುವನ್ನು ತಾತ್ಕಾಲಿಕವಾಗಿ ಈಜದಂತೆ ಕಕ್ಕಾಬಿಕ್ಕಿ ಮಾಡೋದೇ ಈ ಮಾತ್ರೆಯ ಕೆಲಸ. ಹಾಗೆ ಮಾಡಿದಲ್ಲಿ, ‘ ಕೆಲಸ ‘ನ ಮಾಡಿದರೂ, ಗರ್ಭ ಮೂಡುವುದಿಲ್ಲ, ಕಾರಣ ವೀರ್ಯಾಣು ಈಜಿದರೆ ತಾನೇ ಅಂಡಾಣುವನ್ನು ತಲುಪುವುದು ?!
ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನ ಧನಸಹಾಯ ಪಡೆದು ಇಲಿಗಳ ಮೇಲಿನ ಆರಂಭಿಕ ಅಧ್ಯಯನವನ್ನು ಮಾಡಲಾಗಿದೆ. ಫೆಬ್ರವರಿ 14 ರಂದು ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ನಲ್ಲಿ ಇದರ ಬಗ್ಗೆ ಪ್ರಕಟಿಸಲಾಯಿತು. ಟಿಡಿಐ -11861 ಎಂಬ ಈ ಔಷಧದ ಒಂದು ಡೋಸ್ ಮಿಲನದ ಮೊದಲು ತೆಗೆದುಕೊಳ್ಳಬೇಕು. ಆಗ ಅದು ವೀರ್ಯಾಣುವನ್ನು ನಿಶ್ಚಲಗೊಳಿಸುತ್ತದೆ ಎಂದು ಗೊತ್ತಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಈಗ ಇಲಿಗಳ ಮೇಲೆ ಪ್ರಯೋಗ ಯಶಸ್ವಿ ಆಗಿದೆ. ಮುಂದಕ್ಕೆ ಮೊಲಗಳ ಮೇಲೆ ಪ್ರಯೋಗ ನಡೆಯಲಿದ್ದು, ಅಲ್ಲಿ ಸಕ್ಸಸ್ ಕಂಡ ನಂತರ ಗಂಡಸರ ಮೇಲೆ ಕ್ಲಿನಿಕಲ್ ಟ್ರೈಲ್ ನಡೆಯಲಿದೆ. ಅದು ಯಶಸ್ವಿಯಾದರೆ, ಗರ್ಭ ಕಟ್ಟುವ ಭಯದಿಂದ ಕಾಂಡೋಮ್ ಕೊಳ್ಳಬೇಕಾದ ಅನಿವಾರ್ಯತೆಯಿಲ್ಲ. ಸ್ತ್ರೀಯರು ಮಾತ್ರೆ ನುಂಗಿ, ಮುಂದಕ್ಕೆ ಮಕ್ಕಳಾಗದಿದ್ದರೆ- ಎನ್ನುವ ಆತಂಕ ಇಟ್ಟುಕೊಳ್ಳುವ ಸಂಭವವಿಲ್ಲ. ಈಗಿನ ಪ್ರಯೋಗದ ಫಲಿತಾಂಶದ ಪ್ರಕಾರ, ಮುಂದಕ್ಕೆ ಇನ್ನೂ ಕೆಲವು ರೀತಿಯ ಸಂಶೋಧನೆ ನಡೆಯಲಿದ್ದು, ಈ ಮಾತೃಗಳು ಪುರುಷರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಯಶಸ್ವಿ ಪರೀಕ್ಷೆ ಮತ್ತು ಫಲಿತಾಂಶ ಕಂಡುಕೊಂಡಲ್ಲಿ ಪುರುಷರ ಗರ್ಭ ನಿರೋಧಕ ಮಾತ್ರೆ ಶೀಘ್ರ ಮಾರುಕಟ್ಟೆಗೆ ಬರಲಿದೆ.
ಈ ಔಷಧವು ಕರಗಬಲ್ಲ ಅಡೆನೈಲ್ ಸೈಕ್ಲೇಸ್ ಅಥವಾ ಎಸ್ಎಸಿ ಎಂಬ ಸೆಲ್ಯುಲಾರ್ ಸಿಗ್ನಲಿಂಗ್ ಪ್ರೋಟೀನ್ ಅನ್ನು ನಿರ್ಬಂಧಿಸುತ್ತದೆ. ಇದರ ಪರಿಣಾಮವಾಗಿ ವೀರ್ಯಾಣುಗಳು ಈಜುವುದನ್ನು ಆ ಹಾರ್ಮೋನುಗಳು ತಡೆಯುತ್ತದೆ. ಇಲಿಗಳ ಮೇಲೆ ಪರೀಕ್ಷಿಸಿದ ನಂತರ, ಪರಿಣಾಮವು ಸುಮಾರು ಮೂರು ಗಂಟೆಗಳ ಕಾಲ ಇರುತ್ತದೆ ಎಂದು ತೋರಿಸಿದೆ. 24 ಗಂಟೆಗಳ ಹೊತ್ತಿಗೆ, ವೀರ್ಯಾಣುಗಳ ಮುಂದಿನ ಬ್ಯಾಚ್ ಸಾಮಾನ್ಯವಾಗಿ ಈಜು ಶುರುಮಾಡುತ್ತದೆ. ಆದುದರಿಂದ ಪುರುಷರಿಗೆ ಇದು ದೀರ್ಘಕಾಲಿಕ ತೊಂದರೆ ನೀಡದು ಎಂದಿದ್ದಾರೆ ವಿಜ್ಞಾನಿಗಳು. ಸ್ತ್ರೀಯರು ಮತ್ತು ಪುರುಷರು ಕೂಡ ಈ ಮಾತ್ರೆಗಾಗಿ ಕಾದಿದ್ದಾರೆ.
