Gadaga: ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಆದರೆ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಇದು ನಿಧಿ ಅಲ್ಲ, ಬದಲಿಗೆ ಕುಟುಂಬದ ಹಿರಿಯರು ತಮ್ಮ ಮನೆಯಲ್ಲೇ ಇಟ್ಟಿದ್ದ ಬಂಗಾರ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ನಂತರ ಅದು ನಮ್ಮದೇ ಬಂಗಾರ, ನಮಗೆ ವಾಪಸ್ ಕೊಟ್ಟುಬಿಡಿ ಎಂದು ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ನಿಧಿಯ ವಾರಸುದಾರರು ಯಾರು? ಪತ್ತೆ ಹಚ್ಚಿದ ವರಿಗೆ ಎಷ್ಟು ಪಾಲು ಸಿಗುತ್ತದೆ? ಈ ಬಗ್ಗೆ ಕಾಯ್ದೆ ಹೇಳುವುದೇನು? ಇಲ್ಲಿದೆ ನೋಡಿ ಡೀಟೇಲ್ಸ್
ನಿಧಿ ಸಿಕ್ಕಿದ ಲಕ್ಕುಂಡಿಯ ಗ್ರಾಮಕ್ಕೆ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ಹಂಪಿ ವಿಭಾಗದ ನಿರ್ದೇಶಕ ಸೈಜೇಶ್ವರ ಸ್ಥಳ ಪರಿವೀಕ್ಷಣೆ ವೇಳೆ ಮಾತನಾಡಿ, ಭಾರತದಲ್ಲಿ ಬ್ರಿಟೀಷರ ಕಾಲದಿಂದಲೂ ನಿಧಿ ಕಾಯ್ದೆ ಇದೆ. 100 ವರ್ಷಕ್ಕಿಂತ ಹಳೆಯದಾದ ನಿಧಿ ಸರ್ಕಾರದ ಸ್ವತ್ತು ಆಗಲಿದೆ. 1962 ನಿಯಮ ಪ್ರಕಾರ 10 ರೂ. ಮೌಲ್ಯಕ್ಕಿಂತ ಹೆಚ್ಚಿನ ಮೊತ್ತದ ವಸ್ತು ಸಿಕ್ಕರೆ ಅದು ಸರ್ಕಾರಕ್ಕೆ ಸಲ್ಲುತ್ತದೆ. ಭೂಮಿಯ ಒಂದು ಅಡಿ ಆಳದಲ್ಲಿ ಏನೆ ಸಿಕ್ಕರೂ ಅದು ಸರ್ಕಾರದ ಸ್ವತ್ತು ಆಗಲಿದೆ. ಆದರೆ ಸಿಕ್ಕ ನಿಧಿಯಲ್ಲಿ 5ನೇ ಒಂದು ಭಾಗ ಕುಟುಂಬಕ್ಕೆ ಸಲ್ಲುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಲ್ಲದೆ ಇದು ಯಾವ ಕಾಲಕ್ಕೆ ಸೇರಿದ್ದು, ಯಾರ ಆಳ್ವಿಕೆಯ ಎಂಬುದು ಬಗ್ಗೆ ಪರಿಶೀಲನೆ ನಡೆಯಬೇಕಿದೆ. ವಶಕ್ಕೆ ಪಡೆದ ಆಭರಣಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡುತ್ತೇವೆ. ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ವರದಿ ನೀಡುತ್ತೇವೆ ಎಂದರು.
