ಹಿಂದಿನ ದಿನಗಳಲ್ಲಿ ಮನೆಯಿಂದ ಎಲ್ಲಿಗಾದರೂ ಹೊರಹೋಗಬೇಕಾದರೆ ಜೊತೆಯಲ್ಲಿ ಹಣವನ್ನು ಕಡ್ಡಾಯವಾಗಿ ಇಟ್ಟುಕೊಂಡು ಹೋಗಲಾಗುತ್ತಿತ್ತು. ಆದರೆ ಇದೀಗ ಕಾಲ ತುಂಬಾ ಬದಲಾಗಿದೆ. ಈಗೇನಿದ್ದರೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ಹಣ ವರ್ಗಾವಣೆ ಮಾಡುವ ಕಾಲ. ಇಂದು ಬೀದಿಬದಿಯ ವ್ಯಾಪಾರಿಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆನ್‌ಲೈನ್ ಪಾವತಿಯನ್ನು ಸ್ವೀಕರಿಸುತ್ತಾರೆ. ಡಿಜಿಟಲ್ ಇಂಡಿಯಾದಲ್ಲಿ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ತಂತ್ರಜ್ಞಾನದ ಹೊಸ ಯುಗ ಪ್ರಾರಂಭವಾಗಿದೆ. ಯುಪಿಐ ಮೂಲಕ ಎಲ್ಲ ರೀತಿಯ ಹಣಕಾಸು ವ್ಯವಹಾರ, ಬ್ಯಾಂಕಿನ ವ್ಯವಹಾರ ತುಂಬಾ ಸುಲಭವಾಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಸ್ವೀಕೃತಿಯನ್ನು ಇದು ತುಂಬಾ ಸುಲಭಗೊಳಿಸಿದೆ.
ಇದೀಗ ಬ್ಯಾಂಕ್‌ಗಳು ತಮ್ಮ ಯುಪಿಐ ವಹಿವಾಟಿಗೆ ಮಿತಿಯನ್ನು ನಿಗದಿಪಡಿಸಿದ್ದು, ಡಿಜಿಟಲ್ ಕ್ಯಾಶ್ ಲಿಮಿಟ್ ಅನ್ನು ಘೋಷಿಸಿದೆ. ಪ್ರತಿಯೊಂದು ಬ್ಯಾಂಕ್‌ಗಳು ಕೂಡ ಯುಪಿಐ ಪಾವತಿಗೆ ಇದೀಗ ಮಿತಿಯನ್ನು ಹೊಂದಿಸಿವೆ. ಬೇರೆ ಬೇರೆ ಬ್ಯಾಂಕ್‌ಗಳು ಬೇರೆ ಬೇರೆ ರೀತಿಯಲ್ಲಿ ಈ ಮಿತಿಗಳನ್ನು ಹೊಂದಿಸಿವೆ.
ಅಮೆಜಾನ್ ಪೇ ಯುಪಿಐ ಮೂಲಕ ಪಾವತಿ ಮಾಡುವ ಗರಿಷ್ಠ ಮಿತಿಯನ್ನು ರೂ 1 ಲಕ್ಷಕ್ಕೆ ನಿಗದಿಪಡಿಸಿದೆ. ಅಮೆಜಾನ್ ಪೇ ಯುಪಿಐಯಲ್ಲಿ ನೋಂದಾಯಿಸಿದ ನಂತರ, ಬಳಕೆದಾರರು ಮೊದಲ 24 ಗಂಟೆಗಳಲ್ಲಿ ರೂ 5000 ದವರೆಗೆ ಮಾತ್ರ ವಹಿವಾಟು ನಡೆಸಬಹುದಾಗಿದೆ. ಮತ್ತೊಂದೆಡೆ, ಬ್ಯಾಂಕ್ ಅನ್ನು ಅವಲಂಬಿಸಿ, ದಿನಕ್ಕೆ ವಹಿವಾಟಿನ ಸಂಖ್ಯೆಯನ್ನು 20 ಕ್ಕೆ ನಿಗದಿಪಡಿಸಲಾಗಿದೆ.
ಫೋನ್ ಪೇ (Phone Pe) ಯುಪಿಐ ಮೂಲಕ ಒಂದು ದಿನದ ಗರಿಷ್ಠ ಮೊತ್ತದ ಮಿತಿ 1 ಲಕ್ಷ ರೂ. ಒಂದು ದಿನದಲ್ಲಿ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಮಾಡಬಹುದು. ಫೋನ್ ಪೇ ಯಾವುದೇ ಗಂಟೆಯ ವಹಿವಾಟಿನ ಮಿತಿಯನ್ನು ನಿಗದಿಪಡಿಸಿಲ್ಲ.
ಗೂಗಲ್ ಪೇ (Google Pay) ಅಥವಾ ಜಿಪೇ ಯ ಮೂಲಕ, ಭಾರತೀಯ ಬಳಕೆದಾರರು ದಿನವಿಡೀ ಯುಪಿಐ ಮೂಲಕ ರೂ 1 ಲಕ್ಷದವರೆಗೆ ಪಾವತಿಗಳನ್ನು ಮಾಡಬಹುದು. ಒಂದು ದಿನದಲ್ಲಿ ಕೇವಲ 10 ವಹಿವಾಟುಗಳನ್ನು ಮಾಡಬಹುದು. ಅಂದರೆ, ನೀವು ಒಂದು ದಿನದಲ್ಲಿ ಗರಿಷ್ಠ 10-10 ಸಾವಿರದ 10 ವಹಿವಾಟುಗಳನ್ನು ಪೂರ್ಣಗೊಳಿಸಬಹುದು. ಆದಾಗ್ಯೂ, ಗೂಗಲ್ ಪೇ ಯಾವುದೇ ಗಂಟೆಯ ವಹಿವಾಟು ಮಿತಿಯನ್ನು ನಿಗದಿಪಡಿಸಿಲ್ಲ.
ಪೇಟಿಎಮ್ UPI ಮೂಲಕ, ಒಂದು ದಿನದಲ್ಲಿ ಕೇವಲ ರೂ 1 ಲಕ್ಷ ಹಾಗೂ ಪೇಟಿಎಮ್ ಮೂಲಕ ಒಂದು ಗಂಟೆಯಲ್ಲಿ ಕೇವಲ ರೂ 20,000 ವಹಿವಾಟು ನಡೆಸಬಹುದಾಗಿದೆ. ಈ ಆಪ್ ಮೂಲಕ ಒಂದು ಗಂಟೆಯಲ್ಲಿ 5 ವಹಿವಾಟುಗಳನ್ನು ಮಾಡಬಹುದು ಮತ್ತು ಒಂದು ದಿನದಲ್ಲಿ ಕೇವಲ 20 ವಹಿವಾಟುಗಳನ್ನು ಮಾಡಬಹುದು.
NPCI (ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ) ತಿಳಿಸಿರುವ ಮಾರ್ಗಸೂಚಿಗಳ ಪ್ರಕಾರ ಯುಪಿಐ ಮೂಲಕ ದಿನವೊಂದಕ್ಕೆ 1 ಲಕ್ಷದವರೆಗಿನ ವಹಿವಾಟುಗಳನ್ನು ನಡೆಸಬಹುದು. ಬೇರೆ ಬೇರೆ ಬ್ಯಾಂಕ್‌ಗಳು ಈ ಮಿತಿಯನ್ನು ಬೇರೆ ಬೇರೆಯಾಗಿ ನಿಗದಿ ಪಡಿಸಿದೆ. ದೈನಂದಿನ ಯುಪಿಐ ವರ್ಗಾವಣೆ ಮಿತಿಯನ್ನು 20 ವಹಿವಾಟುಗಳಿಗೆ ಹೊಂದಿಸಲಾಗಿದೆ. ಮಿತಿ ಮುಗಿದ ನಂತರ, ಮಿತಿಯನ್ನು ನವೀಕರಿಸಲು 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ.
