ಇತ್ತೀಚೆಗಂತೂ ವಾಹನ ಚಾಲಕರು ಬೇಕಾಬಿಟ್ಟಿ, ತಮಗಿಷ್ಟ ಬಂದ ಹಾಗೆ ವಾಹನ ಚಲಾಯಿಸುತ್ತಾರೆ. ಕೆಲವೊಂದು ಬಾರಿ ವಾಹನ ಚಾಲಕರ ಮಿತಿ ಮೀರಿದ ವೇಗದಿಂದ ಅಪಘಾತಗಳು ಸಂಭವಿಸಿದ್ದೂ ಇದೆ. ಇತ್ತೀಚೆಗೆ ಈ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ ವಾಹನ ಚಾಲಕರು ಅಷ್ಟೇ ಅಲ್ಲ ಪಾದಚಾರಿಗಳು ಕೂಡ ತುಂಬಾ ಎಚ್ಚರಿಕೆಯಿಂದಿರಬೇಕು. ತಮ್ಮ ಕಣ್ಣು ಮತ್ತು ಕಿವಿಗಳನ್ನು ತೆರೆದಿಡಬೇಕು. ಯಾಕಂದ್ರೆ ರಸ್ತೆಯಲ್ಲಿ ಸಾಗುತ್ತಿದ್ದರೆ, ಯಾವಾಗ, ಏನು ಅನಿರೀಕ್ಷಿತ ಘಟನೆ ಸಂಭವಿಸುತ್ತದೋ ಹೇಳಲಾಗದು.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪಾಲಕರ ಬೇಜವಾಬ್ದಾರಿಯಿಂದ ಮಗುವೊಂದು ಆಟವಾಡುತ್ತಾ ಒಂಟಿಯಾಗಿ ರಸ್ತೆಯ ಮಧ್ಯ ಭಾಗಕ್ಕೆ ಬಂದಿದ್ದು, ಸದ್ಯ ಭಾರೀ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇನ್ನು ನೀವು ಈ ವಿಡಿಯೋ ನೋಡಿದ್ರೆ ಒಂದು ಬಾರಿ ಎದೆ ಝಲ್ ಎನ್ನತ್ತೆ!!. ಯಾರಪ್ಪಾ ಈ ಪುಟ್ಟ ಮಗೂನ ರಸ್ತೆಯಲ್ಲಿ ಬಿಟ್ಟಿರೋದು ಅನಿಸುತ್ತೆ.
ವಿಡಿಯೋದಲ್ಲಿ, ಪುಟ್ಟ ಮಗುವೊಂದು ಪೆಡಲ್ ಸ್ಕೂಟರ್ನಿಂದ ಆಟವಾಡುತ್ತಾ ನೇರವಾಗಿ ರಸ್ತೆಯ ಮೇಲೆ ಬರುತ್ತಿದೆ. ಹಾಗೇ ರಸ್ತೆಯಲ್ಲಿ ವಾಹನಗಳು ಬರುತ್ತಿದ್ದು, ಕಾರೊಂದು ವೇಗವಾಗಿ ಬರುತ್ತಿರುವಾಗಲೇ ಸರಿಯಾಗಿ ಈ ಬಾಲಕ ರಸ್ತೆಯ ನಡುವೆ ಬರುತ್ತಾನೆ. ಕಾರಿನ ಚಾಲಕನಿಗೆ ಸ್ವಲ್ಪ ದೂರದಿಂದಲೇ ರಸ್ತೆಯಲ್ಲಿ ಮಗುವಿರೋದು ಕಂಡಿದೆ. ಹಾಗಾಗಿ ಬೇಗನೆ ಕಾರು ನಿಲ್ಲಿಸಿದ್ದಾನೆ. ಇಲ್ಲವಾಗಿದ್ದರೆ ಮಗುವಿನ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು.
ಹಾಗೇ ಸ್ವಲ್ಪದೂರದಲ್ಲೇ ಮಗುವಿನ ಹಿಂದೆ ಅದರ ತಾಯಿಯೂ ಓಡಿ ಬರುತ್ತಿದ್ದರು. ತಾಯಿ ಓಡಿ ಬರುವಷ್ಟರಲ್ಲಿ ಒಂದರ ಹಿಂದೆ ಒಂದು ಎಂಬಂತೆ ಎಲ್ಲಾ ವಾಹನಗಳು ಸರತಿ ಸಾಲಿನಲ್ಲಿ ನಿಂತವು. ಸದ್ಯ ಚಾಲಕನ ದೂರದೃಷ್ಠಿಯಿಂದ ಮಗು ಬಚಾವ್ ಆಗಿದ್ದು ಸಂತೋಷದ ವಿಚಾರವೇ, ಆದರೆ ಪೋಷಕರು ತಮ್ಮ ಕೆಲಸದಲ್ಲಿ, ಮೊಬೈಲ್ ಇತ್ಯಾದಿಗಳಲ್ಲಿ ತೊಡಗಿ ಮಕ್ಕಳನ್ನು ಮರೆತರೆ ಹೀಗೇ ಆಗೋದು. ಆ ಎಳೆ ಮಕ್ಕಳು ಏನು ಅರಿಯದೆ ತಮ್ಮಷ್ಟಕ್ಕೆ ಆಟವಾಡುತ್ತಾ ಸಾಗುತ್ತವೆ. ಒಂದು ವೇಳೆ ಅಪಘಾತವಾಗಿದ್ದರೆ ಮತ್ತೆ ದುಃಖಪಟ್ಟು ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಮಕ್ಕಳ ಬಗ್ಗೆ ಮೊದಲೇ ಗಮನ ಕೊಡುವುದು ಉತ್ತಮ.
