Astronaut: ಆಕಾಶದಲ್ಲಿ ಹಾರಬೇಕೆಂಬ ಆಸೆ ಇರುವವರೆಲ್ಲರೂ ಇಂದು ವಿಮಾನದಲ್ಲಿ ಹಾರಾಟ ನಡೆಸುತ್ತಾರೆ. ಆದರೆ ಇನ್ನು ಕೆಲವರಿಗೆ ತಾವು ಕಲ್ಪನಾ ಚಾವ್ಲಾ ಸುನಿತಾ ವಿಲಿಯಮ್ಸ್ ರೀತಿ ಅಂತರಿಕ್ಷಯಾನವನ್ನು ಕೈಗೊಳ್ಳಬೇಕೆಂಬ ಮಹಾದಾಸೆ ಇದೆ. ಇತ್ತೀಚಿಗೆ ನಮ್ಮ ಭಾರತೀಯ ಹೆಮ್ಮೆಯ ಮಗ ಶುಭಾಂಶು ಶುಕ್ಲ ಕೂಡ ಅಂತರಿಕ್ಷಯಾನವನ್ನು ಕೈಗೊಂಡು ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಹೀಗೆ ಅಂತರಿಕ್ಷಕ್ಕೆ ಹಾರುವವರೆಲ್ಲರೂ ಕೂಡ ದವಡೆಹಲ್ಲನ್ನು ಕೀಳಿಸಬೇಕು ಎಂಬುದು ನಿಮಗೆ ಗೊತ್ತಾ? ಇದು ಯಾರಿಗೂ ಗೊತ್ತಿಲ್ಲದ ಸತ್ಯ. ಈ ಬಗ್ಗೆ ಇದೀಗ ಶುಭಾಂಶು ಶುಕ್ಲ ಅವರೇ ರಿವಿಲ್ ಮಾಡಿದ್ದಾರೆ.
ಹೌದು, ಐಐಟಿ ಬಾಂಬೆಯಲ್ಲಿ ಮಾತನಾಡುತ್ತಿದ್ದ ಶುಭಾಂಶು ಶುಕ್ಲಾ, ಗಗನಯಾತ್ರಿಗಳಾಗಬೇಕೆನ್ನುವವರು ಹಲ್ಲುಗಳ ತ್ಯಾಗಕ್ಕೆ ಸಿದ್ಧ ಇರಬೇಕೆಂದು ಹೇಳಿದ್ದಾರೆ. ಗಗನಯಾತ್ರಿಗಳ ದವಡೆ ಹಲ್ಲುಗಳನ್ನು ಕಿತ್ತು ಕಳುಹಿಸುವುದು ವಡಿಕೆಯಾಗಿದ್ದು, ಶುಭಾಂಶು ಶುಕ್ಲ ಅವರ ಎರಡು ದವಡೆ ಹಲ್ಲುಗಳನ್ನು ಕೀಳಲಾಗಿತ್ತಂತೆ. ಹಾಗಿದ್ರೆ ಯಾಕೆ ಹೀಗೆ? ಮುಂದೆ ಓದಿ.
‘ನಿಮ್ಮ ದಂತ ಆರೋಗ್ಯ ಬಹಳ ಮುಖ್ಯ. ಗಗನಯಾತ್ರಿ ಆಯ್ಕೆ ಮತ್ತು ತರಬೇತಿ ವೇಳೆ ಹಲವು ಅಭ್ಯರ್ಥಿಗಳು ತಮ್ಮ ಹಲ್ಲು ಕೀಳಿಸಿಕೊಳ್ಳುತ್ತಾರೆ. ಅದರಲ್ಲೂ ದವಡೆ ಹಲ್ಲನ್ನು ಮುಂಜಾಗ್ರತೆಯಾಗಿ ತೆಗೆಯಲಾಗುತ್ತದೆ’ ಎಂದು ಹೇಳಿದ್ದಾರೆ. ಯಾಕೆಂದರೆ ಭೂಮಿಯಿಂದ ಬಹಳ ದೂರದಲ್ಲಿ, ಗುರುತ್ವಾಕರ್ಷಣೆ ಶಕ್ತಿ ತೀರಾ ನಗಣ್ಯವಾಗಿರುವಂತಹ ಸ್ಪೇಸ್ಗೆ ಹೋಗಲಾಗುತ್ತದೆ. ಅಲ್ಲಿ ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ಅದಕ್ಕೆ ಚಿಕಿತ್ಸೆ ಹೇಗೆ ಪಡೆದುಕೊಳ್ಳುವುದು ಇತ್ಯಾದಿಯ ತರಬೇತಿ ಕೊಟ್ಟು ಕಳುಹಿಸಲಾಗುತ್ತದೆ. ಆದರೆ, ಹಲ್ಲಿನ ಸಮಸ್ಯೆ ಬಂದರೆ ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಂತೆ. ಅದರಲ್ಲೂ ಗಗನನೌಕೆಯೊಳಗೆ ದಂತ ಶಸ್ತ್ರಚಿಕಿತ್ಸೆ ಅಸಾಧ್ಯವೇ ಅಂತೆ. ಗಗನಯಾತ್ರಿಗಳಿಗೆ ಸ್ವಲ್ಪ ಹಲ್ಲಿನ ಸಮಸ್ಯೆ ಬಂದರೂ ಅದರು ಗಂಭೀರ ಸ್ವರೂಪಕ್ಕೆ ತಿರುಗುವ ಅಪಾಯ ಇರುತ್ತದೆ. ಹೀಗಾಗಿ ಈ ರೀತಿ ಮಾಡ್ಬೇಕಾಗುತ್ತದೆ ಅಂತೆ.
