ಎಂದೂ ಕಂಡರಿಯದ ಭಯಂಕರ ಚಂಡಮಾರುತಕ್ಕೆ ಅಮೆರಿಕ ಬೆಚ್ಚಿಬಿದ್ದಿದೆ. ಐದು ರಾಜ್ಯಗಳಲ್ಲಿ ಅಪ್ಪಳಿಸಿದ ಚಂಡಮಾರುತದ ಪರಿಣಾಮದಿಂದ ಇದುವರೆಗೆ 80ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಇದೊಂದು ನೆನೆಸಿಕೊಳ್ಳದಂತಹ ದುರಂತವಾಗಿದ್ದು, ಎಷ್ಟು ಜನ ನಾಪತ್ತೆಯಾಗಿದ್ದಾರೆ, ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೆಂಟುಕಿಯೊಂದರಲ್ಲೇ 70ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರಲ್ಲಿ ಹೆಚ್ಚಿನ ಜನರು ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರಾಗಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಈ ಘಟನೆಯೂ ಕೆಂಟುಕಿಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ, ಅತ್ಯಂತ ಮಾರಣಾಂತಿಕ ಚಂಡಮಾರುತದ ಘಟನೆಯಾಗಿದೆ. ಚಂಡಮಾರುತ ಅಪ್ಪಳಿಸಿದಾಗ ಮೇಣದಬತ್ತಿಯ ಕಾರ್ಖಾನೆಯಲ್ಲಿ ಸುಮಾರು 110 ಜನರು ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕಟ್ಟಡ ಕುಸಿದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಇದುವರೆಗೆ ನಲವತ್ತು ಜನರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಚಂಡಮಾರುತವು 320 ಕಿ.ಮೀ ದೂರದ ಪ್ರದೇಶದವರೆಗೆ ಹಾನಿ ಮಾಡಿದೆ. ಇದಕ್ಕೂ ಹಿಂದೆ 1925ರಲ್ಲಿ ಮಿಸೌರಿಯಲ್ಲಿ 252 ಕಿ.ಮೀಗಳ ದೂರದ ಪ್ರದೇಶದವರೆಗೆ ಹಾನಿ ಮಾಡಿದ್ದು, ಈ ಹಿಂದಿನ ದೊಡ್ಡ ಚಂಡಮಾರುತವಾಗಿತ್ತು ಎಂದು ಕೆಂಟಕಿಯ ಗವರ್ನರ್ ಆಂಡಿ ಬೆಶಿಯರ್ ಹೇಳಿದ್ದಾರೆ.
ದಕ್ಷಿಣ ಇಲಿನಾಯ್ಸ್ ನಗರದ ಎಡ್ವಡ್ಸ್‍ವಿಲ್ಲೆಯಲ್ಲಿ ಅಮೇಜಾನ್ ವೇರ್‍ಹೌಸ್‍ಗೆ ಅಪ್ಪಳಿಸಿದಾಗ ಸುಮಾರು 100 ಕೆಲಸಗಾರರು ಒಳಗೆ ಸಿಲುಕಿಕೊಂಡಿದ್ದರು. ನೂರಾರು ರಕ್ಷಣಾ ಸಿಬ್ಬಂದಿ ಹರಸಾಹಸ ಮಾಡಿ 45 ನೌಕರರನ್ನು ರಕ್ಷಿಸಿದ್ದಾರೆ. ಒಬ್ಬರನ್ನು ಚಿಕಿತ್ಸೆಗಾಗಿ ಪ್ರಾದೇಶಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್‍ನ ಅಗ್ನಿಶಾಮಕ ಮುಖ್ಯಸ್ಥ ಜೇಮ್ಸ್ ವೈಟ್ ಫೋರ್ಡ್ ತಿಳಿಸಿದ್ದಾರೆ.
