Poisonous Mushroom: ಹಳ್ಳಿ ಜನರು ಮಳೆಗಾಲದ ವೇಳೆ ಕಾಡಿನಲ್ಲಿ ಬೆಳೆಯುವ ಅಣಬೆಯನ್ನು ( Mushroom) ಸಾರು ಮಾಡಿ ತಿನ್ನುವುದು ಸಾಮಾನ್ಯ. ಅಣಬೆಯ ಸಾಂಬಾರು ತುಂಬಾ ರುಚಿಯಾಗಿರುತ್ತದೆ. ಆದರೆ ಅದರಲ್ಲಿ ಕೆಲವು ವಿಷಕಾರಿ ಅಣಬೆಯೂ (Poisonous Mushroom)ಇರುವುದರಿಂದ ಎಚ್ಚರವಾಗಿರಬೇಕು. ಇತ್ತೀಚೆಗೆ ಕಾಡ ಅಣಬೆ ತಿಂದು ಹಲವಾರು ಕಡೆ ಮೃತಪಟ್ಟಿರುವ ಸುದ್ದಿ ಬೆಳಕಿಗೆ ಬಂದಿದೆ.
ಇದೀಗ ಆಸ್ಟ್ರೇಲಿಯಾದ ಹಳ್ಳಿಯೊಂದರಲ್ಲಿ ಕಾಡು ಅಣಬೆಯಿಂದ ಮಾಡಲಾದ ಅಡುಗೆಯನ್ನು ತಿಂದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಾವಿನ ಪ್ರಕರಣದ ಕುರಿತು ಆಸ್ಟ್ರೇಲಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.
ಮೆಲ್ಬೋರ್ನ್‌ನಿಂದ ಕೊಂಚ ದೂರದಲ್ಲಿರುವ ಲಿಯೊಂಗಾಥಾದಲ್ಲಿ ಎರಿನ್ ಪ್ಯಾಟರ್ಸನ್ ಹೆಸರಿನ ಮಹಿಳೆ ವಾಸವಿದ್ದು, ಜುಲೈ 29ರಂದು ಆಕೆ ಮಾವಂದಿರಾದ ಗೇಲ್ ಮತ್ತು ಡ್ಯಾನ್ ಪ್ಯಾಟರ್ಸನ್ ಅವರನ್ನು ಊಟಕ್ಕೆ ಕರೆದಿದ್ದಳು.
ಅವರಿಬ್ಬರೊಂದಿಗೆ ಗೇಲ್‌ನ ಸಹೋದರಿಯರಾದ ವಿಲ್ಕಿನ್ಸನ್ ಮತ್ತು ಹೀದರ್ ಕೂಡ ಊಟಕ್ಕೆ ಹೋಗಿದ್ದರು. ಕಾಡು ಅಣಬೆಯನ್ನು ಬಳಸಿ ಮಾಡಿದ್ದ ಅಡುಗೆಯನ್ನು ಈ ನಾಲ್ವರೂ ತಿಂದಿದ್ದಾರೆ. ಅವರು ಊಟ ಮಾಡಿ ಸ್ವಲ್ಪ ಸಮಯದಲ್ಲೇ ಅನಾರೋಗ್ಯ ಕಾಡಲಾರಂಭಿಸಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮೆಲ್ಬೋರ್ನ್‌ಗೆ ಅವರನ್ನು ಕರೆದೊಯ್ಯಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಹೀದರ್(66) ಮತ್ತು ಗೇಲ್ (70) ಕಳೆದ ಶುಕ್ರವಾರ ನಿಧನರಾಗಿದ್ದಾರೆ. 70 ವರ್ಷದ ಡಾನ್ ಶನಿವಾರದಂದು ನಿಧನರಾಗಿದ್ದಾರೆ. ಹಾಗೆಯೇ 68 ವರ್ಷದ ಇಯಾನ್ ಸ್ಥಿತಿ ಕೂಡ ಗಂಭೀರವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಕೃತ್ತಿನ ಕಸಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಈ ನಾಲ್ವರು ಅನಾರೋಗ್ಯಕ್ಕೆ ತುತ್ತಾದರೂ ಅಡುಗೆ ಮಾಡಿ ಅವರೆಲ್ಲರಿಗೆ ಬಡಿಸಿದ್ದ ಸೊಸೆ ಎರಿನ್‌ಗೆ ಏನೂ ಆಗಿಲ್ಲ. ಹಾಗಾಗಿ ಆಕೆಯ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದು ಹೇಗಾಯಿತು ಎನ್ನುವುದು ತನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾಳೆ. ಸದ್ಯ ಆಕೆಯನ್ನು ಪೊಲೀಸರ ವಶದಿಂದ ಬಿಡಲಾಗಿದೆ.
ಆದರೆ ಆಕೆ ಇನ್ನೂ ಆರೋಪಿ ಸ್ಥಾನದಲ್ಲಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಅಪರಾಧಿ ಯಾರು ಎನ್ನುವುದು ಪೊಲೀಸರಿಂದ ಪೂರ್ಣ ಪ್ರಮಾಣದ ತನಿಖೆ ನಡೆದ ನಂತರವೇ ತಿಳಿದು ಬರಬೇಕಿದೆ.
ಇದನ್ನೂ ಓದಿ: ಏನಿದು ಬೌ ಬೌ ಹಬ್ಬದ ವಿಶೇಷ ?ಡಾಗ್ ಮೀಟ್ ಫೆಸ್ಟಿವಲ್ ಎಲ್ಲಿ ನಡೆಯುತ್ತೆ?ಪಾಚಿ ಛಪ್ಪರಿಸೋ ದೇಶ ಯಾವುದು?
