US: ಹೊಸ ವರ್ಷದ ಸಂಭ್ರಮದಲ್ಲಿದ್ದ ಇಡೀ ವಿಶ್ವದ ಜನತೆಗೆ ಅಮೆರಿಕಾದ ಆ ಒಂದು ನಿರ್ಧಾರ ದೊಡ್ಡ ಶಾಕ್ ಉಂಟು ಮಾಡಿತ್ತು. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಂಡಿರುವ ಅಮೆರಿಕದ ನಡೆ ಎಲ್ಲರ್ಯ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರಣ ರಾತ್ರೋರಾತ್ರಿ ವೆನುಜುವೇಲದ ಮೇಲೆ ದಾಳಿ ಮಾಡಿದ ಅಮೆರಿಕ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಆತನ ಪತ್ನಿ ಸಿಲಿಯಾ ಫ್ಲೋರ್ಸ್‌ರನ್ನು ಬಂಧಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿದ್ದು.
ಹೌದು, ಅಂತರಾಷ್ಟ್ರೀಯ ಕಾನೂನುಗಳನ್ನು ಧಿಕ್ಕರಿಸಿ ವೆನಿಜುವೆಲಾ ಡ್ರಗ್ಸ್ ದಂಧೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಅಮೆರಿಕಾ ದಾಳಿ ನಡೆಸಿದೆ. ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಆತನ ಪತ್ನಿ ಸಿಲಿಯಾ ಫ್ಲೋರ್ಸ್‌ರನ್ನು ಬಂಧಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿದೆ. ಆದರೆ ಇದೀಗ ಅಮೆರಿಕ ಡ್ರಗ್ಸ್ ದಂಧೆ, ಅಕ್ರಮ ಶಸ್ತ್ರಾಸ್ತ್ರ ಹಾಗೂ ತೈಲ ವಿಚಾರವನ್ನು ಕಾರಣವಾಗಿ ಕೊಟ್ಟಿರುವುದು ಕೇವಲ ನೆಪಕ್ಕಷ್ಟೇ, ಇದರ ಹಿಂದೆ ಬೇರೆ ಕಾರಣ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಯಸ್, ವೆನಿಜುವೆಲಾದಲ್ಲಿ ಅಪಾರ ತೈಲ ನಿಕ್ಷೇಪವಿದೆ. ಜಗತ್ತಿನಲ್ಲೇ ಅತೀ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರವದು. ಇದು ಸುಮಾರು 303 ಶತಕೋಟಿ ಬ್ಯಾರೆಲ್ ತೈಲವನ್ನು ಹೊಂದಿದೆ, ಇದು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಒಟ್ಟು ಸೇರಿಸಿದರೆ ಅದಕ್ಕಿಂತಲೂ ಅಧಿಕ ಎನ್ನಲಾಗಿದೆ. ವೆನೆಜುವೆಲಾದ ತೈಲ ರಫ್ತಿನ ಸರಿಸುಮಾರು 76-80% ರಷ್ಟು ಚೀನಾ ಖರೀದಿಸುತ್ತದೆ. ನವೆಂಬರ್ 2025 ರಲ್ಲಿ, ಚೀನಾ ದಿನಕ್ಕೆ ವೆನೆಜುವೆಲಾದಿಂದ 613,000 ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿತು. ಹೀಗಾಗಿ ಈ ತೈಲ ನಿಕ್ಷೇಪದ ಮೇಲೆ ಟ್ರಂಪ್ ಕಣ್ಣು ಬಿದ್ದಿದೆ ಎನ್ನಲಾಗಿದೆ.
ಇದೀಗ ವೆನಿಜುವೆಲಾ ಮೇಲೆ ದಾಳಿ ನಡೆಸಿದ ನಂತರ ಅಮೆರಿಕಾ ಅಲ್ಲಿನ ತೈಲ ನಿಕ್ಷೇಪದ ಮೇಲೆ ಹತೋಟಿ ಪಡೆದುಕೊಂಡಿದೆ. ಇಲ್ಲಿನ ತೈಲ ಕ್ಷೇತ್ರದ ಜೊತೆಗೆ ಭಾರತದ ತೈಲ ಕಂಪನಿಗಳೂ ಪಾಲುದಾರಿಕೆ ಹೊಂದಿವೆ. ಹೀಗಾಗಿ ಅಮೆರಿಕಾ ಹತೋಟಿಗೆ ಬಂದಿರುವುದರಿಂದ ಭಾರತದ ಮೇಲೂ ಪರಿಣಾಮ ಬೀರಲಿದೆ. ಇದು ಭಾರತಕ್ಕೆ ಸಕಾರಾತ್ಮಕ ಪರಿಣಾಮ ಬೀರುತ್ತದೋ ಇಲ್ಲಾ, ಇದನ್ನೇ ಇಟ್ಟುಕೊಂಡು ಟ್ರಂಪ್ ಭಾರತದ ಮೇಲೆ ಮತ್ತಷ್ಟು ಒತ್ತಡ ಹೇರುತ್ತಾರೋ ಕಾದು ನೋಡಬೇಕಿದೆ.
ಇನ್ನೂ ಅದಲ್ಲದೆ ವೆನುಜುವೇಲ ಬ್ರಿಕ್ಸ್‌ಗೆ ಸೇರುವ ಯೋಚನೆಯಲ್ಲಿತ್ತು. ಬ್ರಿಕ್ಸ್ ಎಂದರೆ ಭಾರತ, ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಹಾಗೂ ಚೀನಾ ಇರುವ ಸಂಘ. ಬ್ರಿಕ್ಸ್ ದೇಶಗಳು ವಿಶ್ವದ ಶೇ.40ರಷ್ಟು ಜಿಡಿಪಿಯನ್ನು ಕಂಟ್ರೋಲ್ ಮಾಡುತ್ತದೆ. ಭಾರೀ ಪ್ರಮಾಣದ ತೈಲ ಸಂಪತ್ತಿರುವ ವೆನುಜುವೇಲ ಬ್ರಿಕ್ಸ್‌ಗೆ ಸೇರಿದರೆ ಡಾಲರ್‌ಗೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಅಮೆರಿಕಕ್ಕೆ ಗೊತ್ತಾಗಿತ್ತು. ಬ್ರಿಕ್ಸ್‌ನ ಬಲ ಹೆಚ್ಚಾಗುವುದು ಮಾತ್ರವಲ್ಲದೆ, ಡಾಲರ್‌ನ ಮೌಲ್ಯ ಕೂಡ ಕಡಿಮೆ ಆಗಲಿದೆ ಎನ್ನುವ ಅಂದಾಜು ಸಿಕ್ಕಿತ್ತು. ಡಾಲರ್‌ಅನ್ನು ರಕ್ಷಿಸುವ ಸಲುವಾಗಿಯೇ ಅಮೆರಿಕ ಇಡೀ ಅಂತಾರಾಷ್ಟ್ರೀಯ ಸಮುದಾಯವನ್ನು ಧಿಕ್ಕರಿಸಿ ಈ ಸಾಹಸಕ್ಕೆ ಇಳಿದಿದೆ. ಡಾಲರ್ ರಕ್ಷಿಸದಿದ್ದರೆ ತನಗೆ ಉಳಿಗಾಲವಿಲ್ಲ ಅನ್ನೋದು ಅಮೆರಿಕಕ್ಕೂ ಗೊತ್ತು.
