V Somanna : ರೈಲ್ವೆ ಇಲಾಖೆಯ ಸಿಬ್ಬಂದಿಗಾಗಿ ನಡೆಯುವ ಬಡ್ತಿ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು, ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ
ನೈರುತ್ಯ ರೈಲ್ವೆ ವಲಯದಲ್ಲಿ ಕಳೆದ ವರ್ಷ ಸಹಾಯಕ ಲೋಕೋಪೈಲೆಟ್ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ(exam)ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಆ ಮೂಲಕ ಕನ್ನಡಿಗರಿಗೆ ಅನ್ಯಾಯವೆಸಗಲಾಗಿತ್ತು. ಆಗ ಸಚಿವ ವಿ. ಸೋಮಣ್ಣ (V Somanna) ಕನ್ನಡದಲ್ಲೇ ಪರೀಕ್ಷೆಗೆ ಆದೇಶಿಸಿದ್ದರು. ಆದರೆ ಇಲಾಖೆ ಕೆಲ ಪರೀಕ್ಷೆಗಳಿಗೆ ಮಾತ್ರ ಕನ್ನಡಕ್ಕೆ ಅವಕಾಶ ನೀಡಿ ಬಳಿಕ ತೆಗೆದುಹಾಕಿದೆ. ಬೆಂಗಳೂರು ವಿಭಾಗದಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ-ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುವಂತೆ ಇಲಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಆ ಮೂಲಕ ಸಚಿವರ ಆದೇಶಕ್ಕೂ ಬೆಲೆಯಿಲ್ಲದಂತಾಗಿದೆ. ಇದರ ಬೆನ್ನಲ್ಲೇ ಇದೀಗ ವಿ ಸೋಮಣ್ಣ ಅವರು ರೈಲ್ವೆಯ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ರೈಲ್ವೆ ಇಲಾಖೆ ಮೇಲಧಿಕಾರಿಗಳ ಜತೆಗೆ ಸಭೆ ನಡೆಸಿರುವ ಸಚಿವ ವಿ.ಸೋಮಣ್ಣ, ಗೂಡ್ಸ್ ಟ್ರೈನ್ ವ್ಯವಸ್ಥಾಪಕ ಹುದ್ದೆಗೆ ಹೊರಡಿಸಲಾಗಿರುವ ಪರೀಕ್ಷೆ ಅಧಿಸೂಚನೆ ರದ್ದುಪಡಿಸಿ, ಕನ್ನಡ ಸೇರ್ಪಡೆ ಮಾಡಿ ಹೊಸದಾಗಿ ಅಧಿಸೂಚನೆ ಹೊರಡಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
